ಬೆಂಗಳೂರು, ಏ 17 (Daijiworld News/MSP): ಇಡೀ ರಾಷ್ಟ್ರಕ್ಕೆ ತಲೆನೋವಾಗಿ ಪರಿಣಮಿಸಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಮತ್ತಷ್ಟು ಕ್ರಮಕ್ಕೆ ಮುಂದಾಗಿದ್ದು, ಇದೀಗ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 2 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಸ್'ಗಳ ಖರೀದಿಗೆ ನಿರ್ಧರಿಸಿದೆ.
ಕೊರೊನಾ ಮಣಿಸಲು ರಾಜ್ಯದಲ್ಲಿ ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟಿಂಗ್ ಎಂಬ 3ಟಿ ಫಾರ್ಮುಲಾ ಬಳಕೆ ಮಾಡಲಾಗುತ್ತಿದ್ದು, ಆದರೂ ರಾಜ್ಯದಲ್ಲಿ ದಿನದಿಂತ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದರಿಂದ ಮತ್ತಷ್ಟು ಪರೀಕ್ಷೆಯ ಅನಿವಾರ್ಯತೆ ಇದೆ. ಹೀಗಾಗಿ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದು, ಸಭೆಯಲ್ಲಿ ಹೆಚ್ಚುವರಿಯಾಗಿ 2 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಸ್ ಖರೀದಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಟೆಸ್ಟ್ ಕಿಟ್ ಗಳನ್ನು ರವಾನಿಸಲು ಚೀನಾ ಸರ್ಕಾರ ಒಪ್ಪಿಗೆ ನೀಡಿದ್ದು, ಟೆಸ್ಟ್ ಕಿಟ್ ಗಳು ರಾಜ್ಯ ಸರ್ಕಾರದ ತಲುಪಿದ್ದಂತೆ ಕೋವಿಡ್ ಪರೀಕ್ಷೆಗಳ ಸಂಖ್ಯೆಗಳನ್ನು ಹೆಚ್ಚಿಸಲಾಗುತ್ತದೆ ಎಂದು ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. ಅಗತ್ಯವಿರುವ 25,000 ಆರ್'ಟಿ-ಪಿಆರ್ಆರ್ ಕಿಟ್ಸ್ ಗಳಿಗೆ ಈಗಾಗಲೇ ಅನುಮತಿ ದೊರಕಿದೆ. ಸೋಂಕು ಪೀಡಿತರಿಗೆ ಸರ್ಕಾರ ನೇಮಕ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದ್ದಾರೆ.