ಬೆಂಗಳೂರು, ಎ.17 (DaijiworldNews/PY) : ಬಿಪಿಎಲ್ ರಹಿತರಿಗೂ ಶನಿವಾರದಿಂದ ಪಡಿತರ ನೀಡಲಾಗುವುದು ಎಂದು ಆಹಾರ ಹಾಗೂ ನಾಗರೀಕ ಸರಬರಾಜು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಲಾ 10 ಕೆಜಿ ಅಕ್ಕಿಯನ್ನು ಬಿಪಿಎಲ್ಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನೀಡಲಾಗುವುದು. ಎಪ್ರಿಲ್, ಮೇ, ಜೂನ್ನಲ್ಲಿ ಈ ಮೂರು ತಿಂಗಳ ಪಡಿತರವನ್ನು ವಿತರಿಸಲಾಗುವುದು. ಹಾಗಾಗಿ ಅರ್ಜಿ ಸಲ್ಲಿಸಿದ ಪ್ರತಿ ತೋರಿಸಿದರೆ ಪಡಿತರ ಪಡೆಯಲು ಅವಕಾಶವಿದೆ ಎಂದರು.
ಬಿಪಿಎಲ್ ಕಾರ್ಡ್ಗೆ ಸುಮಾರು 2 ಲಕ್ಷದ 22 ಸಾವಿರ ಜನ ಅರ್ಜಿ ಹಾಕಿದ್ದರು. ವಿಲೇವಾರಿಯಾಗಲು ಈಗ 1 ಲಕ್ಷ 89 ಸಾವಿರ ಅರ್ಜಿಗಳು ಉಳಿದಿವೆ. ಹಾಗಾಗಿ ಸರ್ಕಾರವು ಅರ್ಜಿ ಹಾಕಿರುವ ಫಲಾನಭವಿಗಳಿಗೆ ಪ್ರತೀ ತಿಂಗಳು 10 ಕೆ.ಜಿ ಅಕ್ಕಿ ನೀಡುವ ನಿರ್ಧಾರವನ್ನು ಮಾಡಲಾಗಿದ್ದು, ಶನಿವಾರದಿಂದ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರದಿಂದ ಪ್ರಶಾಬಮಂತ್ರಿ ಗರೀಬ್ ಕಲ್ಯಾಣ ಯೋಜನೆ ವತಿಯಿಂದ ಮೂರು ತಿಂಗಳು ಓರ್ವನಿಗೆ 5 ಕೆ.ಜಿ ಅಕ್ಕಿ ಮತ್ತು ಕುಟುಂಬಕ್ಕೆ 1 ಕೆ.ಜಿ ಬೇಳೆಯನ್ನು ಕೊಡುವ ಘೋಷಣೆ ಮಾಡಲಾಗಿದ್ದು, ಹಾಗಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.
ಈಗಾಗಲೇ ಕೇಂದ್ರ ಸರ್ಕಾರ ಕೊಟ್ಟಿರುವಂತಹ ದಾಸ್ತಾನುಗಳನ್ನು ನಮ್ಮ ಮಳಿಗೆಗೆ ಸಾಗಿಸುವ ಕಾರ್ಯ ಮಾಡಿದ್ದೇವೆ. ರಾಜ್ಯದ 19, 800 ಅಂಗಡಿಗಳನ್ನು ಮೇ.1ರಂದು ಒಟ್ಟಿಗೆ ಆರಂಭ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಈ ಮುಖಾಂತರ ಓರ್ವ ವ್ಯಕ್ತಿಗೆ 2 ತಿಂಗಳಿಗಾಗುವಷ್ಟು 10 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ಬೇಳೆಯನ್ನು ಮೇ 1ರಿಂದ ವಿತರಿಸಲಾಗುತ್ತದೆ. ಮುಂದಿನ ತಿಂಗಳು 5 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ ಬೇಳೆಯನ್ನು ಕೊಡುವ ಮೂಲಕ ಸರ್ಕಾರವು ಪ್ರಾಮಾಣಿಕ ಕಾರ್ಯ ಮಾಡಲಿದೆ ಎಂದು ತಿಳಿಸಿದರು.