ಬೆಂಗಳೂರು, ಏ 17 (Daijiworld News/MSP): ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಐಸಿಎಂಆರ್ ನಿಂದ ಅನುಮತಿಗಾಗಿ ಎದುರು ನೋಡುತ್ತಿದ್ದೇವೆ. ಕೊರೋನಾ ಸೋಂಕಿಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿ ಎನ್ನುತ್ತಿದ್ದಾರೆ. ಹೀಗಾಗಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಅನುಮತಿ ಕೋರಿದ್ದೇವೆ. ಆದರೆ ಇನ್ನು ಅನುಮತಿ ಸಿಕ್ಕಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಏಪ್ರಿಲ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 10 ಕೊರೊನಾ ಪರೀಕ್ಷಾ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು. ಕೊರೊನಾ ಸೋಂಕು ಪತ್ತೆಯಾಗದ ಜಿಲ್ಲೆಗಳಲ್ಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲೂ ಕರೊನೊ ಪರೀಕ್ಷಾ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಏ.21ರ ಬಳಿಕ ಮತ್ತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಈವರೆಗೆ 17,168 ಮಂದಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದೆ. ಪ್ರತಿ ದಿನವೂ ಸುಮಾರು 2 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಟೆಸ್ಟಿಂಗ್ ನಲ್ಲಿ ನಾವು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಇದು ಕೊಂಚ ಸಮಾಧಾನಕಾರಿ ವಿಚಾರ ಎಂದರು.
ಏಪ್ರಿಲ್ 20ರ ನಂತರ ಐಟಿ ಕಂಪನಿಗಳಿಗೆ ಲಾಕ್ ಡೌನ್ ವಿನಾಯಿತಿ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.