ಬೆಂಗಳೂರು, ಏ 17(DaijiworldNews/SM): ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆಯೂ ಕೂಡ ನಿಯಂತ್ರಣಕ್ಕೆ ತರಲಾಗುತ್ತಿಲ್ಲ. ಈ ನಡುವೆ ಇದೀಗ ರಾಜ್ಯ ಸರಕಾರದ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಸೋಂಕು ಪತ್ತೆಯಾದ ಆರಂಭದಲ್ಲಿ ಸರಕಾರ ವಿಳಂಬ ನೀತಿ ಅನುಸರಿಸಿದೆ. ಇದರಿಂದಾಗಿ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ವಿಧಾನಸೌಧಕ್ಕೆ ಭೇಟಿ ನೀಡಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡ ವಿವರದ ಬಗ್ಗೆ ಸವಿಸ್ತಾರವಾದ ಮಾಹಿತಿ ಪಡೆದರು. ಇದಾದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಅದಕ್ಕಾಗಿ ಮಾಡಿಕೊಂಡಿರುವ ಸಿದ್ಧತೆ, ವೈದ್ಯಕೀಯ ಸಿಬ್ಬಂದಿಗೆ ಒದಗಿಸಿರುವ ಸೌಕರ್ಯ, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಬಡವರ ನೆರವಿಗೆ ಕೈಗೊಂಡಿರುವ ಕಾರ್ಯಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು.