ಬೆಂಗಳೂರು, ಎ.18 (Daijiworld News/MB) : ಕೊರೊನಾ ನಿಯಂತ್ರಣಕ್ಕಾಗಿ ಮಾಡಲಾಗಿರುವ ಲಾಕ್ಡೌನ್ನ ಪರಿಣಾಮದಿಂದಾಗಿ ಜನರು ಸಂಕಷ್ಟದಲ್ಲಿದ್ದು ಈ ನಿಟ್ಟಿನಲ್ಲಿ ಸರ್ಕಾರ ಜನರ ಕಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಅಕ್ಕಿ ವಿತರಿಸಲು ತೀರ್ಮಾನ ಮಾಡಿದೆ.
ಈ ಕುರಿತು ಶುಕ್ರವಾರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಪತ್ರಿಕಾಗೋಷ್ಠಿ ನಡೆಸಿ ಜನರು ತಾವು ಅರ್ಜಿ ಸಲ್ಲಿಸಿರುವುದಕ್ಕೆ ಪುರಾವೆ ತೋರಿಸಿದಲ್ಲಿ ಒಟಿಪಿ ಆಧಾರದಲ್ಲಿ ಪಡಿತರ ನೀಡಲಾಗುತ್ತದೆ. ಮೂರು ತಿಂಗಳುಗಳ ಕಾಲ 1.89 ಲಕ್ಷ ಬಿಪಿಎಲ್ ಅರ್ಜಿದಾರರಿಗೆ ತಲಾ 10 ಕೆ.ಜಿಯಂತೆ ಉಚಿತವಾಗಿ ನೀಡಲಾಗುತ್ತದೆ. ಇನ್ನು 1.09 ಲಕ್ಷ ಎಪಿಎಲ್ ಅರ್ಜಿದಾರರ ಪೈಕಿ ಅಕ್ಕಿ ಬೇಕೆಂದು ಹೇಳಿದ 61 ಸಾವಿರ ಮಂದಿಗೆ ಕೆ.ಜಿ.ಗೆ ₹ 15ರ ದರದಲ್ಲಿ ಪ್ರತಿ ತಿಂಗಳು ಗರಿಷ್ಠ 10 ಕೆ.ಜಿ. ಅಕ್ಕಿಯನ್ನು ಮುಂದಿನ ಮೂರು ತಿಂಗಳು ನೀಡಲಾಗುವುದು. ಪಿಎಂಜಿಕೆವೈ ಯೋಜನೆಯಡಿಯಲ್ಲಿ 3 ತಿಂಗಳು 5 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ ನೀಡುತ್ತಿದ್ದು ಮೇ 1ರಿಂದ ರಾಜ್ಯದ 19,800 ನ್ಯಾಯಬೆಲೆ ಅಂಗಡಿಗಳಲ್ಲಿ ಇದನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರದಿಂದ ರಾಜ್ಯದಲ್ಲಿರುವ 1.19 ಕೋಟಿ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಿದ್ದಲ್ಲಿ ರಾಜ್ಯದಿಂದ 8 ಲಕ್ಷ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ 3 ತಿಂಗಳ ಅವಧಿಗೆ 148 ಕೋಟಿ ಅನುದಾನಕ್ಕೆ ಅಂಗೀಕಾರ ನೀಡಿದೆ ಎಂದು ಹೇಳಿದ್ದಾರೆ.
ಉಜ್ವಲ ಯೋಜನೆಯ ಹಣ 29.23 ಲಕ್ಷ ಕುಟುಂಬಗಳ ಖಾತೆಗೆ ಜಮೆಯಾಗಿದೆ. 8 ಲಕ್ಷದ ಪೈಕಿ. 6.58 ಲಕ್ಷ ಸಿಲಿಂಡರ್ ಪೂರೈಸಲಾಗಿದೆ. 1 ಲಕ್ಷ ಅನಿಲ ಸಂಪರ್ಕ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿಯಲ್ಲಿ ನೀಡಿದ್ದು, 3 ಸಿಲಿಂಡರ್ಗಳನ್ನು ನೀಡಲು ಸರ್ಕಾರ ಒಪ್ಪಿದೆ, ಇದಕ್ಕಾಗಿ ₹ 25 ಕೋಟಿ ಅನುದಾನ ಮಂಜೂರಾಗಿದೆ.
ಕೇಂದ್ರ ಸರ್ಕಾರವು ರಾಯಚೂರು, ವಿಜಯಪುರಗಳಲ್ಲಿ 1 ಲಕ್ಷ ಟನ್ ಹಿಂಗಾರು ಜೋಳ ದಾಸ್ತಾನು ಮಾಡಲು ಅನುಮತಿ ನೀಡಿದೆ. ಇನ್ನು ಒಂದು ತಿಂಗಳ ಅವಧಿವರೆಗೆ ಭತ್ತದ ದಾಸ್ತನು ಮಾಡಲು ಕೂಡಾ ಕೇಂದ್ರ ಸಮ್ಮತಿ ನೀಡಿದೆ.