ನವದೆಹಲಿ, ಏ18 (Daijiworld News/MSP):ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೇ. 3 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಈ ನಡುವೆ ಏಪ್ರಿಲ್ 20 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಪ್ರಾರಂಭಿಸಲು ಕೇಂದ್ರವು ಎನ್ಎಚ್ಎಐಗೆ ಅವಕಾಶ ನೀಡಿದೆ. ಇದರಿಂದಾಗಿ ಟೋಲ್ ಗೇಟ್ ಓಪನ್ಆಗಲಿದ್ದು ಇದು ದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಮೊದಲ ಹಂತದ ಲಾಕ್ಡೌನ್ ಮುಗಿದ ಒಂದು ದಿನದ ನಂತರ ಬಳಿಕ ಅಂದರೆ ಏಪ್ರಿಲ್ 15 ರಿಂದ ಟೋಲ್ ಕಾರ್ಯಾಚರಣೆಯನ್ನು ಪುನರಾರಂಭಿಸಲು ಯೋಜಿಸಲಾಗಿತ್ತು. ಆದರೆ,ಲಾಕ್ಡೌನ್ ಅನ್ನು ಬಳಿಕ ಮೇ 3 ರವರೆಗೆ ವಿಸ್ತರಿಸಲಾಗಿತ್ತು. ಅದೇನೇ ಇದ್ದರೂ, ಗೃಹ ಸಚಿವಾಲಯವು ಏಪ್ರಿಲ್ 20 ರಿಂದ ಅನೇಕ ಅಗತ್ಯ ಕೈಗಾರಿಕೆಗಳಿಗೆ ಕಾರ್ಯಾಚರಣೆ ಪ್ರಾರಂಭಿಸಲು ಅನುಮತಿ ನೀಡಿದೆ.
ಕೈಗಾರಿಕೆಗಳಿಗೆ ಕಾರ್ಯಾಚರಣೆಗೆ ಟ್ರಕ್ಗಳು ಹಾಗೂ ಇತರ ಸರಕು ವಾಹನಗಳ ರಾಜ್ಯ ಮತ್ತು ಅಂತರ್ ರಾಜ್ಯ ಚಲನೆ ಅವಶ್ಯಕವಾಗಿರುವುದರಿಂದ ಟೋಲ್ ಗೇಟ್ ಕಾರ್ಯಚರಿಸಬೇಕಾಗುತ್ತದೆ. ಜತೆಗೆ ಶುಲ್ಕ ಸಂಗ್ರಹದಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯವಾಗುತ್ತದೆ.
ಆದರೆ ಭಾರತದಲ್ಲಿ ಕೊರೊನಾ ವೈರಸ್ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಏತನ್ಮಧ್ಯೆ, ಟೋಲ್ ಸಂಗ್ರಹವನ್ನು ಪ್ರಾರಂಭಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.