ನವದೆಹಲಿ, ಏ18 (Daijiworld News/MSP): ಕೊರೊನಾ ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಉದ್ಯೋಗಿಗಳು ವೇತನ ಕಡಿತ, ಉದ್ಯೋಗ ನಷ್ಟ ಮುಂತಾದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೊರೊನಾ ಹಾಗೂ ಅದರ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್ ಡೌನ್ ನಿಂದ ಜನ ಜೀವನ ಮತ್ತೆ ಸಹಜಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು . ಈ ನಡುವೆ ಜೂನ್ ನಲ್ಲಿ ಮತ್ತೆ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತದೆ.
ಸದ್ಯ ಶೈಕ್ಷಣಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದರೂ, ಪೋಷಕರುಗಳಿಗೆ ತಮ್ಮ ಮಕ್ಕಳನ್ನು ಮುಂದಿನ ತರಗತಿಯ ದಾಖಲಿಸಲು ಶಾಲಾ ಶುಲ್ಕ ಪಾವತಿಸುವಂತೆ ಶಾಲಾ ಆಡಳಿತ ಮಂಡಳಿಗಳು ಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ರವಾನಿಸಿದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಶಾಲಾ ಪ್ರವೇಶಾತಿಗೂ ಮುನ್ನ ಶುಲ್ಕ ಪಡೆಯುವಂತಿಲ್ಲ ಎಂದು ಸೂಚಿಸಿದೆ.
ಮಾತ್ರವಲ್ಲದೆ ಶಾಲಾ ಶುಲ್ಕದಲ್ಲಿ ಹೆಚ್ಚಳ ಮಾಡುವಂತಿಲ್ಲ, ಒಂದೇ ಬಾರಿ ಫೀಸ್ ಪಾವತಿಸಿ ಮಾಡಲು ಒತ್ತಡ ಹೇರುವಂತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.
ಶೈಕ್ಷಣಿಕ ಶುಲ್ಕದಲ್ಲಿ ಈ ಬಾರಿ ವಿನಾಯಿತಿ ನೀಡುವಂತೆಯೂ ಪೋಷಕರು ಮನವಿ ಮಾಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತವನ್ನು ಕಾಪಾಡಲು ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.