ಬಳ್ಳಾರಿ, ಎ.18 (DaijiworldNews/PY) : ಬಿಸಿ ನೀರಿಗೆ ಉಪ್ಪು, ಅರಶಿಣ ಹಾಕಿ ಬಾಯಿ ಮುಕ್ಕಳಿಸಿದರೆ ಕೊರೊನಾ ಕಡಿಮೆಯಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಶನಿವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಣ್ಣೀರಿನ ಬದಲು ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿದರೆ ಕೊರೊನಾ ಕಡಿಮೆ ಆಗುತ್ತದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಲು ಬಿಸಿ ನೀರಿಗೆ ಉಪ್ಪು, ಅರಶಿಣ ಹಾಕಿ ಬಾಯಿ ಮುಕ್ಕಳಿಸಿ. ಚೀನಾದಲ್ಲಿ ಜನರು ಇದೇ ರೀತಿಯಾಗಿ ಮಾಡಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ನಾನು ವೈದ್ಯನಲ್ಲ. ಈ ಬಗ್ಗೆ ನಾನು ಯಾವುದೋ ಆರ್ಟಿಕಲ್ನಲ್ಲಿ ಓದಿದ್ದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಹಾವೇರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಎಲ್ಲೆಲ್ಲಿ ಸೂರ್ಯನ ಕಿರಣ ಅಧಿಕವಾಗಿ ಬೀಳುತ್ತಿವೆಯೋ ಅಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಹೆಚ್ಚು ಗುಣಮುಖರಾಗುತ್ತಿದ್ದಾರೆ ಎಂದಿದ್ದರು.
ಶನಿವಾರ ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಆಹಾರದ ಕಿಟ್ ವಿತರಣೆಯ ಸಂದರ್ಭಆರೋಗ್ಯ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದರು. ದಾನಿಗಳು ನೀಡಿದ್ದ ಆಹಾರದ ಕಿಟ್ ವಿತರಣೆಗೆ ಬಂದಿದ್ದ ವೇಳೆ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕಿಟ್ ವಿತರಣೆ ಮಾಡಿದ್ದಾರೆ.