ಬೆಂಗಳೂರು, ಎ.18 (Daijiworld News/MB) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಇದರಿಂದಾಗಿ ಮುಖ್ಯವಾಗಿ ಅಸಂಘಟಿತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಅವರ ಬಗ್ಗೆ ಯಾವುದೇ ಮಾತನ್ನು ಆಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶಗೊಂಡಿದ್ದಾರೆ.
ಈ ಕುರಿತಾಗಿ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಯಾರೂ ಕೂಡಾ ಸಣ್ಣ ಸಣ್ಣ ಕಾರ್ಮಿಕ ವರ್ಗದ ಕುರಿತಾಗಿ ಮಾತನಾಡುವುದಿಲ್ಲ. ರೈತರು, ಹಮಾಲಿ, ಬಡಿಗೇರ, ಕಮ್ಮಾರ, ಕುಂಬಾರ, ಮೀನುಗಾರ, ಸವಿತಾ ಸಮಾಜ, ಬೀಡಿ ಕಟ್ಟುವವರು, ಬೀದಿ ವ್ಯಾಪಾರಿಗಳು, ಆಟೋ, ಟ್ಯಾಕ್ಸಿ ಚಾಲಕರು ಸೇರಿ ಅನೇಕ ಕಾರ್ಮಿಕ ವಲಯಗಳ ಕಾರ್ಮಿಕರು ಸಂಕಷ್ಟದಲ್ಲಿ ಇದ್ದಾರೆ. ಈ ಕುರಿತಾಗಿ ರಾಜ್ಯದ ಸಚಿವರು ಕೂಡಾ ಮಾತನಾಡಿಲ್ಲ. ಮತ್ತೆ ಕಾರ್ಮಿಕ ಸಚಿವರು ಎಲ್ಲಿ ಇದ್ದಾರೊ ಗೊತ್ತಿಲ್ಲ ಎಂದು ಕುಟುಕಿದರು.
ನಾನು ಈ ಕುರಿತಾಗಿ ಅತ್ಯಂತ ದುಖಃದಿಂದ ಮಾತನಾಡುತ್ತಿದ್ದೇನೆ. ಕೆಸಿಸಿಸಿ ಅಧ್ಯಕ್ಷನಾಗಿ ಅಲ್ಲ. ಸಮಾನ್ಯವಾಗಿ ಮಾತಾನಾಡುತ್ತಿದ್ದೇನೆ. ನಾನು ಈ ಕುರಿತಾಗಿ ಸಾಮಾನ್ಯವಾಗಿ ಮಾತಾನಾಡುತ್ತಿದ್ದೇನೆ. ಒಂದು ತಿಂಗಳಿನಿಂದ ರಾಜ್ಯ ಲಾಕ್ಡೌನ್ನಲ್ಲಿದೆ. ಈವರೆಗೂ ನಾನು ಮಾತನಾಡಬಾರದು ಎಂದು ಭಾವಿಸಿದ್ದೆ. ಆದರೆ ಸರ್ಕಾರ ಮಾತ್ರ ಈ ವಿಷಯದಲ್ಲಿ ವಿಫಲವಾಗಿದೆ ಎಂದು ಟೀಕೆ ಮಾಡಿದರು.
₹ 10 ಸಾವಿರ ಕೋಟಿ ನರೇಗಾ ಯೋಜನೆಯಡಿಯಿದೆ. ಅದನ್ನು ನರೇಗಾ ಕೂಲಿ ಕಾರ್ಮಿಕರಿಗೆ ತಲುಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₹ 10 ಸಾವಿರ ರೂಪಾಯಿ ಕೊಡಬೇಕು. ಪ್ರತಿ ಕಾರ್ಮಿಕನಿಗೂ ಪರಿಹಾರ ನೀಡಬೇಕು. ಈ ಸಂದರ್ಭದಲ್ಲಿ ತರಕಾರಿ, ಹೂವು, ಹಣ್ಣು ನಾಶವಾಗುತ್ತಿದೆ. ರೈತರು ಬಹಳ ಸಂಖಷ್ಟದಲ್ಲಿ ಇದ್ದಾರೆ. ಈ ಕುರಿತಾಗಿ ಈವರೆಗೂ ಅಧಿಕಾರಿಗಳು ಸಮೀಕ್ಷೆ ಮಾಡಿಲ್ಲ. ಕೃಷಿ ಸಚಿವರು ಯಾವುದೇ ಸಮಸ್ಯೆಗಳು ಇದ್ದಲ್ಲಿ ಸರ್ಕಾರಕ್ಕೆ ತಿಳಿಸುವಂತೆ ಹೇಳುತ್ತಾರೆ. ಆದರೆ ಯಾರಿಗೆ ಯಾವ ನಂಬರ್ಗೆ ಕರೆ ಮಾಡಿ ಹೇಳಬೇಕು ಎಂದು ಪ್ರಶ್ನಿಸಿದರು.
ಯಾವ ರೈತನೂ ಮೋಸ ಮಾಡಲು ಸಾಧ್ಯವಿಲ್ಲ. ರೈತರು ಅತಂತ್ರದ ಸ್ಥಿತಿಯಲ್ಲಿ ದುಕುತ್ತಿದ್ದಾನೆ. ಈ ಸಂದರ್ಭದಲ್ಲಿಯೂ ರೈತರ ಸಂಕಷ್ಟಕ್ಕೆ ಸಹಾಯವಾಗದ ಇಂತಹ ಸರ್ಕಾರ ಯಾಕೆ ಬೇಕು. ಪ್ರತಿ ತಾಲ್ಲೂಕಿನಲ್ಲಿ ನೂರು ಕೋಟಿ ವ್ಯಯ ಆಗುತ್ತಿದೆ ಎಂದು ಹೇಳಿದರು.
ನಾವು ಕೇಂದ್ರ, ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನು ಒಪ್ಪಿಕೊಂಡಿದ್ದೇವೆ. ಅದಕ್ಕೆ ಬೆಂಬಲ ಕೂಡಾ ನೀಡಿದ್ದೇವೆ. ಜೀವ ಇದ್ದರೆ ಮಾತ್ರ ವ್ಯವಹಾರ, ರಾಜಕೀಯ. ಇದು ಯಾವುದೇ ಜಾತಿ ಧರ್ಮಕ್ಕೆ ಬಂದಿರುವ ಕಾಯಿಲೆ ಅಲ್ಲ ಎಂದೂ ಅವರು ಹೇಳಿದರು.