ಕೊಪ್ಪಳ, ಎ.18 (DaijiworldNews/PY) : ರೈತರು ಮಧ್ಯಮರ್ತಿಗಳನ್ನು ನಂಬಿ ವ್ಯಾಪಾರ ಮಾಡಬಾರದು. ಅವರಿಗೆ ಇದರಿಂದ ನಷ್ಟವಾಗಲಿದೆ. ಈ ಸಂದರ್ಭದಲ್ಲಿ ಆನ್ಲೈನ್ ಟ್ರೇಡಿಂಗ್ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಆನ್ಲೈನ್ ಟ್ರೇಡಿಂಗ್ ಕೆಲವು ಕಡೆ ನಡೆದಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತಿದ್ದೇನೆ. ರೈತರಿಗೆ ಕೊರೊನಾ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದ್ದೆ. ಈ ಸಂದರ್ಭ ಆನ್ಲೈನ್ ಟ್ರೇಡಿಂಗ್ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತರಿಗೆ ಯಾವುದೇ ನಿರ್ಬಂಧವಿಲ್ಲ. ಅಂತರಾಜ್ಯ ಮಾರಾಟಕ್ಕೂ ನಿರ್ಬಂಧವಿಲ್ಲ. ರೈತರ ಉತ್ಪನ್ನ ಮಾರಾಟಕ್ಕೆ ಗ್ರೀನ್ ಪಾಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗೆ ಪ್ರಶ್ನೆ ಮಾಡಿದ್ದನ್ನು ಸಮರ್ಥಿಸಿಕೊಂಡ ಅವರು, ನಾನು ಬೆಳೆ ಪರಿಶೀಲನೆ, ಸೋಂಕು ನಿಯಂತ್ರಣ ಕುರಿತ ಸಭೆ ನಡೆಸಲು ಬಂದಿದ್ದೇನೆಯೇ ಹೊರತು ಪಿಕ್ನಿಕ್ಗೆ ಬಂದಿರಲಿಲ್ಲ. ನಾನು ಮಂತ್ರಿಯಾಗಿ ಬೆಳೆ ಹಾನಿ ಪರಿಶೀಲನೆಗೆ ಆಗಮಿಸಿದ್ದರೂ ಡಿಸಿ ಸ್ಥಳಕ್ಕೆ ಬಾರದೇ ಇರುವುದನ್ನು ಪ್ರಶ್ನೆ ಮಾಡಿದ್ದರಲ್ಲಿ ತಪ್ಪೇನಿದೆ. ನಾನು ಸರ್ಕಾರದ ಸಂಬಳ ಪಡೆದು ಜನರ ಕೆಲಸ ಮಾಡುತ್ತೇನೆ. ಸರ್ಕಾರದ ಸಂಬಳ ಪಡೆಯುವವರು ಜನರ ಕೆಲಸ ಮಾಡಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲದಿರುವುದು ಒಳ್ಳೆಯ ವಿಷಯ. ಕೊಪ್ಪಳದಲ್ಲೂ ಎಪ್ರಿಲ್ ತಿಂಗಳಾಂತ್ಯಕ್ಕೆ ಕೊರೊನಾ ಪರೀಕ್ಷಾ ಪ್ರಯೋಗಾಲಯ ಪ್ರಾರಂಭಿಸಲಾಗುವುದು ಎಂದರು.
ಇಷ್ಟು ದೊಡ್ಡ ರಾದ್ದಾಂತಕ್ಕೆ ತಬ್ಲೀಘಿಗಳು ಸಹಕರಿಸದೇ ಇರುವುದೇ ಕಾರಣ. ಜುಬಿಲಿಯಂಟ್ ಫ್ಯಾಕ್ಟರಿ ಪ್ರಕರಣವೂ ಕೂಡಾ ಆಗಿದೆ ಎಂದು ಹೇಳಿದರು.