ಬೆಂಗಳೂರು, ಎ.18 (Daijiworld News/MB) : ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಕೊರೊನಾ ಪರಿಸ್ಥಿತಿ ಕುರಿತಾಗಿ ಅಧಿಕಾರಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 12 ಪ್ರಕರಣ ಪತ್ತೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ರಾಜ್ಯದಲ್ಲಿ ಮೇ. ಮೂರರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆದರೆ ಕಂಟೋನ್ಮೆಂಟ್ ಜೋನ್ ಎಂದು ಗುರುತಿಸಿರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ಡೌನ್ ಮುಂದುವರಿಯುತ್ತದೆ ಎಂದು ಹೇಳಿದರು.
ಕೈಗಾರಿಕೆಗಳನ್ನು ನಡೆಸಬಹುದು, ಕಟ್ಟಡ ನಿರ್ಮಾಣ ಸಾಮಾಗ್ರಿ ಸಾಗಾಟಕ್ಕೆ ಅವಕಾಶ ನೀಡಲಾಗುವುದು, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ ಮಾಡಬಹುದು, ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸಬಹುದು. ಆದರೆ ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಾರೆ.
ಏಪ್ರಿಲ್ 20ರ ಬಳಿಕ ಐಟಿ ವಲಯದಲ್ಲಿ ಶೇ. 30 ರಷ್ಟು ಕೆಲಸಕ್ಕೆ ಅವಕಾಶ ನೀಡಲಾಗುವುದು. ಆದರೆ ಯಾವುದೇ ಹೊಸ ಪಾಸ್ ಇನ್ನು ಮುಂದೆ ವಿತರಿಸುವುದಿಲ್ಲ. ಕಚೇರಿಯ ಗುರುತಿನ ಚೀಟಿ ಇದ್ದರೆ ಸಾಕಾಗುತ್ತದೆ. ಕಾರಿನಲ್ಲಿ ಓಡಾಟಕ್ಕೆ ಪಾಸ್ ಬೇಕು ಎಂದು ತಿಳಿಸಿದರು.
ಅಂತರ್ ಜಿಲ್ಲೆಯ ಓಡಾಟಕ್ಕೆ ಅವಕಾಶವಿಲ್ಲ. ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೈಗಾರಿಕೆಗಳ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಒಂದು ಜಿಲ್ಲೆಯನ್ನಾಗಿ ಪರಿಗಣನೆ ಮಾಡಲಾಗುತ್ತದೆ. ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಉಗುಳುವುದನ್ನು ನಿಷೇಧ ಮಾಡಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲೆ ಮಾಧ್ಯಮದವರು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹದಲ್ಲಿ ಲಾಕ್ಡೌನ್ ಉಲ್ಲಂಘನೆ ಕುರಿತಾಗಿ ಪ್ರಶ್ನಿಸಿದ್ದು, ಯಾವುದೇ ನಿಯಮದ ಉಲ್ಲಂಘನೆಯಾಗಿಲ್ಲ. ಎಲ್ಲಾ ಅನುಮತಿ ನೀಡಲಾಗಿದ್ದು ಅವರು ಸರಳವಾಗಿಯೇ ಕಾರ್ಯಕ್ರಮ ಮಾಡಿದ್ದಾರೆ. ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಅವರು ತಮ್ಮ ಬಂಧು ಬಳಗ ದೊಡ್ಡ ಸಂಖ್ಯೆಯಲ್ಲಿ ಇದ್ದರೂ ಇತಿಮಿತಿಯಲ್ಲಿ ವಿವಾಹ ಕಾರ್ಯಕ್ರಮ ಮಾಡಿದ್ದಾರೆ ಎಂದು ತಿಳಿಸಿದರು.