ಬೆಂಗಳೂರು, ಎ.18 (DaijiworldNews/PY) : ದ್ವಿ-ಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆ ಎಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ ಎಂದು ಸಿಎಂ ಬಿಎಸ್ವೈ ಅವರು ಹೇಳಿದ್ದಾರೆ.
ಐ.ಟಿ.ಬಿ.ಟಿ ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ ನೀತಿಯನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ಪರಿಸ್ಥಿತಿ ಕುರಿತಾಗಿ ಅಧಿಕಾರಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 12 ಪ್ರಕರಣ ಪತ್ತೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ರಾಜ್ಯದಲ್ಲಿ ಮೇ. ಮೂರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆದರೆ ಕಂಟೋನ್ಮೆಂಟ್ ಜೋನ್ ಎಂದು ಗುರುತಿಸಿರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ಡೌನ್ ಮುಂದುವರಿಯುತ್ತದೆ ಎಂದು ಹೇಳಿದ್ದರು.
ಏಪ್ರಿಲ್ 20ರ ಬಳಿಕ ಐಟಿ ವಲಯದಲ್ಲಿ ಶೇ. 30 ರಷ್ಟು ಕೆಲಸಕ್ಕೆ ಅವಕಾಶ ನೀಡಲಾಗುವುದು. ಆದರೆ ಯಾವುದೇ ಹೊಸ ಪಾಸ್ ಇನ್ನು ಮುಂದೆ ವಿತರಿಸುವುದಿಲ್ಲ. ಕಚೇರಿಯ ಗುರುತಿನ ಚೀಟಿ ಇದ್ದರೆ ಸಾಕಾಗುತ್ತದೆ. ಕಾರಿನಲ್ಲಿ ಓಡಾಟಕ್ಕೆ ಪಾಸ್ ಬೇಕು ಎಂದು ತಿಳಿಸಿದ್ದರು.