ಬೆಂಗಳೂರು, ಎ.19 (Daijiworld News/MB) : ಕೊರೊನಾ ವೈರಸ್ ಬಾವಲಿಗಳಿಂದ ಹರಡುತ್ತದೆ ಎಂದು ವದಂತಿಗಳು ಹರಡುತ್ತಿದೆ. ಇದರಿಂದಾಗಿ ಕೆಲವೆಡೆ ಬಾವಲಿಗಳನ್ನು ನಾಶ ಮಾಡುವುದು ಅದರ ವಾಸ ಸ್ಥಾನ ನಾಶ ಮಾಡುವಂತಹ ಕಾರ್ಯ ನಡೆಯುತ್ತಿದೆ. ವಾಸ್ತವವಾಗಿ ಬಾವಲಿಯಿಂದ ಕೊರೊನಾ ಹರಡುವುದಕ್ಕೆ ಯಾವುದೇ ಪುರಾವೆಯಿಲ್ಲ. ಅವುಗಳನ್ನು ಕೊಂದಲ್ಲಿ, ಅದರ ವಾಸ ಸ್ಥಾನ ನಾಶ ಮಾಡಿದ್ದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಪುನಟಿ ಶ್ರೀಧರ್ ಎಚ್ಚರಿಕೆ ನೀಡಿದ್ದಾರೆ.
ಇತ್ತೇಚೆಗೆ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ದೇಶದಲ್ಲಿರುವ ಬಾವಲಿಗಳ ಪೈಕಿ ಎರಡು ಪ್ರಬೇಧಗಳಾದ ಟೀರೋಪಸ್ ಹಾಗೂ ರೌಸೆಟಸ್ನಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ವರದಿ ಪ್ರಕಟಿಸಲಾಗಿತ್ತು. ಇದರಿಂದಾಗಿ ಕೊರೊನಾ ರೋಗವೂ ಕೂಡಾ ಬಾವಲಿಯಿಂದಲ್ಲೇ ಹರಡುತ್ತದೆ ಎಂಬ ವದಂತಿಗೆ ಕಾರಣವಾಯಿತು. ಜನರು ತಪ್ಪಾಗಿ ಬಾವಲಿಗಳಿಗೆ ಹಾನಿ ಮಾಡುತ್ತಿದ್ದಾರೆ. ಬಾವಲಿಗಳಿಂದ ಸೋಂಕು ಹರಡುವುದಿಲ್ಲ ಎಂದು ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇನ್ನು ಈ ಕುರಿತಾಗಿ ಮಾಹಿತಿ ನೀಡಿದ ಬ್ಯಾಟ್ ಕನ್ಸರ್ವೇಷನ್ ಇಂಡಿಯಾ ಟ್ರಸ್ಟ್ನ ಟ್ರಸ್ಟಿ ರಾಜೇಶ್ ಪುಟ್ಟಸ್ವಾಮಯ್ಯ, ಕೊರೊನಾ ವೈರಸ್ಗಳು ಒಮದು ಕುಟುಂಬ, ಅದರಲ್ಲಿ ಅನೇಕ ಉಪಜಾತಿಗಳೂ ಕೂಡಾ ಇದೆ. ಈ ಪೈಕಿ ಕೆಲವು ಕೊರೊನಾ ವೈರಸ್ಗಳು ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗೆ ಕಾರಣವಾಗುತ್ತದೆ. ಆದರೆ ಭಾರತದ ಬಾವಲಿಗಳಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ಬೇರೆ ಹಾಗೂ ಕೋವಿಡ್ ರೋಗ ಹರಡುತ್ತಿರುವ ವೈರಸ್ ಬೇರೆ. ಕೋವಿಡ್ 19 ಎಲ್ಲಾ ಕೊರೊನಾ ವೈರಸ್ಗಳಿಂದ ಹರಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈಗಾಗಲೇ ಬಾವಲಿಗಳ ವಾಸಸ್ಥಾನ ನಾಶವಾಗಿದೆ. ಇನ್ನು ಈ ವದಂತಿಯಿಂದಾಗಿ ಬಾವಲಿಗಳ ವಾಸಸ್ಥಾನವಾದ ಮರಗಳನ್ನು ಕಡಿಯುವ ಕುರಿತಾಗಿ ಹಲವು ದೂರುಗಳು ಬಂದಿದೆ. ಬೆಂಗಳೂರಿನ ಜೆ.ಪಿ.ನಗರದಲ್ಲೂ ಸ್ಥಳೀಯರು ಬಾವಲಿಗಳಿಗೆ ನೆಲೆಯಾಗಿರುವ ಮರವೊಂದನ್ನು ಕಡಿಯಲು ಮುಂದಾಗಿದ್ದರು. ನಮ್ಮಲ್ಲಿ ಎರಡು ಜಾತಿಯ ಬಾವಲಿಗಳು ಇದೆ. ಆ ಪೈಕಿ ದೊಡ್ಡ ಜಾತಿಯ ಬಾವಲಿಗಳು ಹೂಗಳ ಮಕರಂದ, ಚಿಗುರೆಲೆ ಹಾಗೂ ಹಣ್ಣುಗಳನ್ನು ಸೇವಿಸಿ ಜೀವಿಸುತ್ತವೆ. ಸಣ್ಣ ಜಾತಿಯ ಬಾವಲಿಗಳು ಹುಳ ಹುಪ್ಪಡಿ, ಕೀಟಗಳನ್ನು ತಿಂದು ಜೀವಿಸುತ್ತದೆ. ಅವುಗಳಿಂದ ಜನರಿಗೆ ಬಹಳ ಅನುಕೂಲವಿದೆ ಈ ಬಾವಲಿಗಳು ಸಸ್ಯಗಳ ಪರಾಗಸ್ಪರ್ಶ ಕ್ರಿಯೆಗಳಲ್ಲಿ ಹಾಗೂ ಬೀಜ ಪ್ರಸಾರದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. ಹಾಗಾಗಿ ಬಾವಲಿಗಳನ್ನುಯ ಕಳೆದು ಕೊಂಡರೆ ನಮಗೆ ನಷ್ಟ ಕಂಡಿತ ಎಂದು ತಿಳಿಸಿದರು.
ಹಾಗೆಯೇ ಬಾವಲಿಗಳು ನೈಸರ್ಗಿಕ ಸೊಳ್ಳೆ ನಿಯಂತ್ರಕಗಳು. ಒಂದು ಪ್ರಭೇದದ ಬಾವಲಿ ಗಂಟೆಗೆ ಸಾವಿರಕ್ಕೂ ಹೆಚ್ಚು ಸೊಳ್ಳೆಗಳನ್ನು ತಿನ್ನುತ್ತದೆ. ಆ ಬಾವಲಿಗಳ ನಾಶವಾದರೆ ಸೊಳ್ಳೆಯಿಂದ ಹರಡುವ ಮಲೇರಿಯಾ, ಡೆಂಗ್ನಂತಹ ರೋಗ ಹೆಚ್ಚಬಹುದು ಎಂದು ತಿಳಿಸಿದರು.