ನವದೆಹಲಿ, ಎ.19 (DaijiworldNews/PY) : ಲಾಕ್ಡೌನ್ ಮಾರ್ಗಸೂಚಿಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕ ಸಮರ್ಪಕವಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ದವಾಗಿದೆ.
ಈಗಾಗಲೇ ದೇಶದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಕಚೇರಿ ಹಾಗೂ ಕೇಂದ್ರ ಸಂಪುಟದ ಕಾರ್ಯದರ್ಶಿ ಕಚೇರಿಯ ಅಧಿಕಾರಿಗಳ ತಂಡ ಇತ್ತೀಚೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಈ ವಿಚಾರವಾಗಿ ಸೂಚಿಸಿದ್ದಾರೆ.
ಸಾಮಾಜಿಕ ಅಂತರ ಇತ್ಯಾದಿ ನಿಯಮಗಳು ತಮ್ಮ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಉಲ್ಲಂಘನೆ ಆಗದಂತೆ ಮಾರ್ಗ ಸೂಚಿಗಳನ್ನು ಯಾವ ರೀತಿ ಸಮರ್ಪಕವಾಗಿ ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ನೀಲನಕ್ಷೆಯೊಂದನ್ನು ತಯಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನೂ ಲಾಕ್ಡೌನ್ ಜಾರಿಯಲ್ಲಿದೆ. ಇದರ ಮಧ್ಯೆ ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರೊಂದಿಗೆ ಕೊರೊನಾ ವೈರಸ್ ವ್ಯಾಪಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂಬ ಮೂರು ಅಂಶಗಳನ್ನು ಜಿಲ್ಲಾಧಿಕಾರಿಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.
ಎ.೨೦ರಿಂದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ತೀರ್ಮಾನದ ಹಿಂದೆಯೂ ಒಂದು ತಂತ್ರಗಾರಿಕೆಯ ಅಡಗಿದ್ದು, ಮಾರ್ಗಸೂಚಿಗಳ ಅನುಷ್ಠಾನಕ್ಕೆ ಸಂಬಂಧಪಟ್ಟ ನೀಲನಕ್ಷೆ ತಯಾರಿಸಲು ಕನಿಷ್ಠ 6-7 ದಿನಗಳ ಅವಕಾಶವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.