ನವದೆಹಲಿ, ಎ.19 (DaijiworldNews/PY) : ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಬೇಸತ್ತ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮೃತವೈದ್ಯನನ್ನು ದೆಹಲಿ ನೆಬ್ ಸರಾಯ್ ಪ್ರದೇಶದಲ್ಲಿ ವಾಸವಾಗಿದ್ದ ರಾಜೇಂದ್ರ ಸಿಂಗ್ (52) ಎನ್ನಲಾಗಿದೆ.
ಆಡಳಿತ ಪಕ್ಷದ ಶಾಸಕ ಹಾಗೂ ಸಹಚರರು ಹಣಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದ ಸಂದರ್ಭ ನನ್ನ ವ್ಯವಹಾರಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಎರಡು ಪುಟಗಳ ಟಿಪ್ಪಣಿಯನ್ನು ಮೃತ ವೈದ್ಯ ಬರೆದಿದ್ದಾರೆ.
ಮೃತ ವೈದ್ಯ ನೀರಿನ ವ್ಯವಹಾರನ್ನೂ ನಡೆಸುತ್ತಿದ್ದರು. ಅವರು ತಮ್ಮ ಕೋಣೆಯಲ್ಲಿ ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೇವ್ಲಿ ಶಾಸಕ ಪ್ರಕಾಶ್ ಜಾರ್ವಾಲ್ ಹಾಗೂ ಅವರ ಸಹಚರ ಕಪಿಲ್ ನಗರ್ ನನ್ನ ಸಾವಿಗೆ ಕಾರಣ ಎಂದು ವೈದ್ಯ ರಾಜೇಂದ್ರ ಸಿಂಗ್ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ವೈದ್ಯ ರಾಜೇಂದರ ಸಿಂಗ್ ಅವರ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಡೈರಿಯಲ್ಲಿ ಶಾಸಕ ಪ್ರಕಾಶ್ ಜಾರ್ವಾಲ್ ಅವರ ಕಿರುಕುಳವನ್ನು ವೈದ್ಯ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾವು ದೆಹಲಿ ಜಲಮಂಡಳಿಗೆ ಟ್ಯಾಂಕರ್ಗಳನ್ನು ಬಾಡಿಗೆ ನೀಡಿರುವುದಾಗಿಯೂ, ಅದಕ್ಕಾಗಿ ಶಾಸಕ ಹಣ ಕೇಳುತ್ತಿರುವುದಾಗಿಯೂ, ಒಂದು ವೇಳೆ ಹಣ ನೀಡದೇ ಇದ್ದರೆ ಜಲಮಂಡಳಿಯಿಂದ ಟ್ಯಾಂಕರ್ಗಳನ್ನು ತೆಗೆದು ಹಾಕುವುದಾಗಿಯೂ ಹಾಗೂ ತನಗೆ ಕೊಲೆ ಬೆದರಿಕೆ ಇದ್ದದ್ದಾಗಿಯೂ ಡೈರಿಯಲ್ಲಿ ವೈದ್ಯ ಬರೆದಿದ್ದಾರೆ.
ಶಾಸಕ ಪ್ರಕಾಶ್ ಜಾರ್ವಾಲ್ ಹಾಗೂ ಸಹಚರರ ವಿರುದ್ದ ಕೊಲೆ ಯತ್ನ, ಸುಲಿಕೆ ಹಾಗೂ ಬೆದರಿಕೆ ಪ್ರಕರಣ ದಾಖಲಾಗಿದೆ.
ಈ ಹಿಂದೆಯೂ ಜಾರ್ವಾಲ್ ಮಹಿಳೆಯನ್ನು ಬೆದರಿಸಿದ ಆರೋಪ ಹೊತ್ತಿದ್ದರು.