ಬೆಂಗಳೂರು, ಎ.19 (Daijiworld News/MB) : ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದು ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದೂ ಯಡಿಯೂರಪ್ಪ ಅವರು ಸಹೃದಯದ ಮಾತುಗಳನ್ನಾಡಿರುವುದಕ್ಕೆ ಅವರಿಗೆ ಮನದಾಳದ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ನನ್ನ ಒಡನಾಡಿಗಳು, ನನ್ನ ಹಿತೈಷಿಗಳು, ನನ್ನ ಜನ, ನನ್ನ ಕಾರ್ಯಕರ್ತರು ಇವರೆಲ್ಲರೊಂದಿಗೆ ಶುಭ ಸಮಾರಂಭವೊಂದರಲ್ಲಿ ಒಟ್ಟಿಗೆ ಸೇರಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಒಂದು ಸುವರ್ಣ ಅವಕಾಶವನ್ನು ಕೈಚೆಲ್ಲಿ ನಿಖಿಲ್ ವಿವಾಹವನ್ನು ಲಾಕ್ಡೌನ್ ನಿಯಮಗಳನ್ನು ಪಾಲಿಸಿ ಸರಳವಾಗಿ ಮಾಡಲಾಯಿತು ಎಂದು ಹೇಳಿದ್ದಾರೆ.
ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ 'ಸಾಮಾಜಿಕ ಮಾಧ್ಯಮ' ದ ಕೆಲವು ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ. ಅವರೆಲ್ಲರೂ ಶರಣರ ಈ ಮಾತನ್ನು ನೆನಪಲ್ಲಿಟ್ಟುಕೊಳ್ಳಬೇಕು. "ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ನೆರೆಮನೆಯ ಸುಡದು ಕೂಡಲಸಂಗಮದೇವಾ" ಎಂದು ಟ್ವೀಟ್ ಮಾಡಿದ್ದಾರೆ.