ಚಂಡೀಗಢ, ಎ.19 (DaijiworldNews/PY) : ಲಾಕ್ಡೌನ್ ನಡುವೆ ತನ್ನ ಮಕ್ಕಳಿಗೆ ಊಟ ಕೊಡಲಾಗದೇ ನೊಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣದ ಗುರುಗ್ರಾಮ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮುಖೇಶ್ (30) ಎನ್ನಲಾಗಿದೆ.
ಮುಖೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮೊಬೈಲ್ ಅನ್ನು 2,500ರೂ.ಗೆ ಮಾರಾಟ ಮಾಡಿದ್ದು, ಆ ಹಣದಲ್ಲಿ ಸಕ್ಕರೆ, ಅಕ್ಕಿ ಹಿಟ್ಟು ಹಾಗೂ ಟೇಬಲ್ ಫ್ಯಾನ್ ಖರೀದಿಸಿ ಪತ್ನಿಗೆ ನೀಡಿದ್ದಾನೆ.
ಫೋನ್ ಮಾರಾಟ ಮಾಡಿ ಉಳಿದ ಹಣವನ್ನು ಪತ್ನಿಯ ಕೈಗೆ ನೀಡಿದ್ದಾನೆ. ಬಳಿಕ ತಾನು ವಾಸವಿದ್ದ ಗುಡಿಸಲಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ವಲ್ಪ ಸಮಯದ ಬಳಿ ಪತ್ನಿ ಪೂನಂ ಗುಡಿಸಲಿನೊಳಕ್ಕೆ ಹೋಗಿ ನೋಡಿದಾಗ ಪತಿ ಮುಖೇಶ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದನು. ಕುಟುಂಬಕ್ಕೆ ಮುಖೇಶ್ ಫೋನ್ ಮಾರಾಟ ಮಾಡಿ ನೀಡಿದ್ದ ಹಣ ಬಿಟ್ಟರೆ ಬೇರೆ ಯಾವುದೇ ಆದಾಯವಿಲ್ಲ. ಹಾಗಾಗಿ ನೆರೆಹೊರೆಯವರು ಹಣ ಸಂಗ್ರಹಿಸಿ ಅಂತಿಮ ವಿಧಿಗಳನ್ನು ಮುಗಿಸಿದ್ದಾರೆ.
ಮುಖೇಶ್ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎರಡು ತಿಂಗಳುಗಳಿಂದ ಯಾವುದೇ ಕೆಲಸವಿರಲಿಲ್ಲ. ಹಾಗಾಗಿ ಆತ ಆರ್ಥಿಕ ಸಂಕಷ್ಟದಲ್ಲಿದ್ದ. ಕೊನೆಗೂ ಅತ ಕೂಲಿ ಮಾಡುತ್ತಿದ್ದ. ಆದರೆ, ಲಾಕ್ಡೌನ್ ಜಾರಿಯಾದ ಕಾರಣ ಕೂಲಿ ಕೆಲಸವೂ ದೊರಕಿಲ್ಲ. ಆ ಸಂದರ್ಭ ಆತ ಸಾಲ ಮಾಡಿಕೊಂಡಿದ್ದ ಇದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಮೃತ ಮುಖೇಶ್ ಮಾವ ಉಮೇಶ್ ಮುಖಿಯಾ ಹೇಳಿದ್ದಾರೆ.
ಮೃತ ಮುಖೇಶ್ನ ಕುಟುಂಬ ಭಿಕ್ಷೆ ಬೇಡುತ್ತಿತ್ತು. ಅವರ ಕುಟುಂಬವು ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲ. ಅದಲ್ಲದೇ, ಆತ ಖಿನ್ನತೆಗೆ ಒಳಗಾಗಿದ್ದನು ಎಂದು ಮುಖೇಶ್ ಸಂಬಂಧಿಕರೊಬ್ಬರು ಹೇಳಿದ್ದಾರೆ ಎಂದು ಪೊಲೀಸ್ ಕಮಿಷನರ್ ಮೊಹಮ್ಮದ್ ಅಕಿಲ್ ತಿಳಿಸಿದ್ದಾರೆ.