ಜಿನೀವಾ, ಎ.19 (Daijiworld News/MB) : ಭಾರತದ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಸ್ವಿಝರ್ಲ್ಯಾಂಡ್ ಸ್ವಿಸ್ನ ಆಲ್ಪ್ಸ್ ಪರ್ವತ ಶ್ರೇಣಿಯ ಮ್ಯಾಟರ್ಹಾರ್ನ್ ಶಿಖರದ ಮೇಲೆ ವಿದ್ಯುತ್ ದೀಪದಲ್ಲಿ ತ್ರಿವರ್ಣ ಧ್ವಜವನ್ನು ಬೆಳಗಿಸಿದೆ.
ಈ ಶಿಖರ ಸ್ವಿಝರ್ಲ್ಯಾಂಡ್ನ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದ್ದು 14,692 ಅಡಿ ಎತ್ತರವಿದೆ. ಈ ಶಿಖರದಲ್ಲಿ ವಿವಿಧ ದೇಶಗಳ ಧ್ವಜಗಳನ್ನು ವಿದ್ಯುತ್ ದೀಪಗಳಿಂದ ಮೂಡಿಸಿ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ವಿರುದ್ಧ ಜಗತ್ತು ಒಗಟ್ಟಾಗಿ ಹೋರಾಡುತ್ತಿದೆ. ಖಂಡಿತವಾಗಿ ಮಾನವೀಯತೆಯು ಈ ಸಾಂಕ್ರಾಮಿಕ ರೋಗವನ್ನು ಸೋಲಿಸುತ್ತದೆ" ಎಂದು ಶಿಖರದ ಮೇಲಿನ ತ್ರಿವ್ರಣ ದ್ವಜದ ಚಿತ್ರವನ್ನು ಫೋಟೋದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಸ್ವಿಸ್ನ ವಿದ್ಯುತ್ ದೀಪ ಕಲಾವಿದ ಗೆರ್ರಿ ಹಾಫ್ಸ್ಟೆಟರ್ ಸ್ವಿಝರ್ಲ್ಯಾಂಡ್ ಮತ್ತು ಇಟಲಿ ನಡುವಿನ ಪಿರಮಿಡ್ ಆಕಾರದ ಶಿಖರದ ಮೇಲೆ ವಿವಿಧ ದೇಶಗಳ ಧ್ವಜಗಳನ್ನು ವಿದ್ಯುತ್ ದೀಪಗಳಿಂದ ಮೂಡಿಸಿದ್ದಾರೆ.
ಇನ್ನು ಈ ಕುರಿತಾಗಿ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಪ್ರವಾಸೋದ್ಯಮ ಸಂಸ್ಥೆ ಜೆರ್ಮಟ್ ಮ್ಯಾಟರ್ಹಾರ್ನ್, ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಕೊರೊನಾ ವೈರಸ್ನಿಂದ ಸಂಕಷ್ಟಕ್ಕೆ ಸಿಲುಕಿದೆ. ಇಷ್ಟು ದೊಡ್ಡ ದೇಶದಲ್ಲಿನ ಸವಾಲುಗಳು ದೊಡ್ಡವೇ. ಮ್ಯಾಟರ್ಹಾರ್ನ್ನಲ್ಲಿ ಮೂಡಿಸಲಾಗಿರುವ ಭಾರತೀಯ ಧ್ವಜವು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮತ್ತು ಎಲ್ಲಾ ಭಾರತೀಯರಿಗೆ ಭರವಸೆ ಮತ್ತು ಶಕ್ತಿ ತುಂಬುವ ಸದುದೇಶದಿಂದ ಕೂಡಿದೆ ಎಂದಿದೆ.
ಜಿನೀವದಲ್ಲಿರುವ ಭಾರತೀಯ ವಿದೇಶ ಸೇವೆಯ ಅಧಿಕಾರಿ ಗುರ್ಲೀನ್ ಕೌರ್ ಸ್ವಿಝರ್ಲ್ಯಾಂಡ್ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಬೆಂಬಲ ನೀಡಿದೆ. ಹಿಮಾಲಯದಿಂದ ಆಲ್ಪ್ಸ್ವರೆಗೆ ಸ್ನೇಹ ಹಸ್ತ ಚಾಚಿದೆ ಎಂದಿದ್ದಾರೆ.