ಬೆಂಗಳೂರು, ಎ.19 (DaijiworldNews/PY) : ಸರ್ಕಾರವು ಲಾಕ್ಡೌನ್ ಮುಗಿಯುವವರೆಗೆ ರೈತರು, ಕಾರ್ಮಿಕರು, ಬಡವರು ಸೇರಿದಂತೆ ಅಸಹಾಯಕರ ನೆರವಿಗೆ ನಿಲ್ಲಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸಿಎಂ ಬಿಎಸ್ವೈ ಅವರಿಗೆ ತಿಳಿಸಿದರು.
ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಿದರು.
ಲಾಕ್ಡೌನ್ ನಿಯಮಗಳು ನೂರಕ್ಕೆ ನೂರರಷ್ಟು ಪಾಲನೆ ಆಗಬೇಕು. ಇದರಲ್ಲಿ ಯಾವುದೇ ರೀತಿಯಾದ ರಿಯಾಯಿತಿ ಬೇಡ. ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿ ಆದೇಶವನ್ನು ಪುನಃ ತೆಗೆದುಕೊಂಡಿದ್ದು ಸರಿ. ವಿವಿಧ ಇಲಾಖೆಗಳಿಂದ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಸರ್ಕಾರವು ಕೊರೊನಾ ನಿಯಂತ್ರಿಸುವ ವಿಷಯದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳು ಸಾಕಷ್ಟಿವೆ. ಸರ್ಕಾರಕ್ಕೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಅಗತ್ಯವಾದ ಸಹಾಯ ನೀಡಲಿದೆ ಎಂದರು.
ಕೊರೊನಾ ನಿಯಂತ್ರಿಸುವ ಬಗ್ಗೆ ನಾವು ಬೇರೆ ರಾಜ್ಯಗಳ ಮಾದರಿಯನ್ನು ಅನುಸರಿಸುವುದು ಸರಿ. ರಾಜ್ಯದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಪರೀಕ್ಷೆ ಪ್ರಮಾಣ ಕಡಿಮೆ ಇದೆ, ಈ ವಿಚಾರವಾಗಿ ಸಿಎಂ ಅವರು ಗಮನ ವಹಿಸಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ನಿಯಂತ್ರಿಸುವ ಹಾಗೂ ತಕ್ಷಣವೇ ರಾಜ್ಯ ಸರ್ಕಾರ ಗಮನಹರಿಸಬೇಕಾದ ಪ್ರಮುಖ ವಿಷಯಗಳ ಬಗೆಗಿನ ೧೫ ಅಂಶದ ವರದಿಯನ್ನಸಿಎಂ ಬಿಎಸ್ವೈ ಅವರಿಗೆ ಸಲ್ಲಿಸಿದ್ದಾರೆ.