ನವದೆಹಲಿ, ಎ.19 (DaijiworldNews/PY) : ಸರ್ಕಾರ ವಿಮಾನ, ರೈಲು ಸಂಚಾರ ಪುನರಾರಂಭಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಮೆ.೪ರಿಂದ ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಿಸಲಿ ತೀರ್ಮಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರೈಲು, ವಿಮಾನ ಸಂಚಾರವನ್ನು ಪುನರಾರಂಭಿಸುವ ವಿಚಾರವಾಗಿ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಶನಿವಾರವೇ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಿಳಿಸಿದ್ದಾರ ಎಂದು ಜಾವಡೇಕರ್ ಅವರು ಹೇಳಿದ್ದಾರೆ.
ಇನ್ನು ಸಾರ್ವಜನಿಕ ಸಾರಿಗೆ ಆರಂಭಿಸಲು ಸರ್ಕಾರ ಸಮಯ ನಿಗದಿಪಡಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಮಾನ, ರೈಲು ಸಂಚಾರವು ಒಂದಲ್ಲ ಒಂದು ದಿನ ಪುನರಾರಂಭಿಸಲೇ ಬೇಕು. ಆದರೆ, ಈಗ ಆ ದಿನ ಯಾವುದೆಂದು ಹೇಳಲು ಆಗುವುದಿಲ್ಲ. ನಾವು ಪ್ರತಿ ದಿನದ ಪರಿಸ್ಥಿತಿಯನ್ನು ಅವಲೋಕನೆ ಮಾಡುತ್ತಿದ್ದೇವೆ. ಈಗ ಈ ವಿಚಾರವಾಗಿ ಚರ್ಚೆ ಬೇಡ ಎಂದರು.
ಈ ವಿಚಾರದ ಬಗ್ಗೆ ಅಂತಿಮವಾದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ. ವದಂತಿ ರವಾನಿಸಬೇಡಿ ಎಂದು ಜಾವಡೇಕರ್ ಅವರು ತಿಳಿಸಿದ್ದಾರೆ
ರೈಲು, ವಿಮಾನ ಸಂಚಾರವು ಮೇ.3ರ ನಂತರವೂ ಪುನರಾರಂಭಗೊಳ್ಳುವುದು ಅನುಮಾನ ಎಂಬುದಾಗಿ ಕೆಲವು ಮೂಲಗಳು ತಿಳಿಸಿವೆ. ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ನಡೆದ ಸಚಿವರ ಸಭೆಯಲ್ಲಿ ವಿಮಾನ, ರೈಲು ಸಂಚಾರ ಪುನರಾರಂಭಿಸುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ ಎನ್ನಲಾಗಿದೆ.
ಅಂತರಾಷ್ಟ್ರೀಯ ಪ್ರಯಾಣಕ್ಕೆ ಮೆ.೪ರಿಂದ ದೇಶೀಯ ಹಾಗೂ ಜೂನ್ 1ರಿಂದ ಟಿಕೆಟ್ ಬುಕ್ ಮಾಡಬಹುದು ಎಂದು ಶನಿವಾರ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿತ್ತು. ಇದರ ಬೆನ್ನಲ್ಲೇ ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡಿದ್ದು, ನಾಗರಿಕ ವಿಮಾನಯಾನ ಸಚಿವಾಲಯವು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗದುಕೊಂಡ ಬಳಿಕವೇ ಬುಕಿಂಗ್ ಪ್ರಾರಂಭಿಸುವುದು ಸರಿ ಎಂದು ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದ್ದರು.