ನವದೆಹಲಿ, ಎ.19 (DaijiworldNews/PY) : ಕೊರೊನಾ ವೈರಸ್ ವಿರುದ್ದ ಭಾರತ ಸಮರೋಪಾದಿಯಲ್ಲಿ ಹೋರಾಡುತ್ತಿದೆ. ಅಲ್ಲದೇ, ಎಲ್ಲಾ ಸರ್ಕಾರ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದು ಕೊರೊನಾ ವೈರಸ್ ವಿರುದ್ದ ಜೀವಿತಾವಧಿವರೆಗಿನ ಅಗೋಚರ ಹೋರಾಟವಾಗಿದೆ. ಇದು ಮಾನವೀಯತೆ ವಿರುದ್ದದ ಹೋರಾಟವಾಗಿದೆ ಎಂದರು.
ಸೇನೆಯ ತಜ್ಞರು, ವೈದ್ಯಕೀಯ ನೆರವು ಸೇರಿದಂತೆ ಇತರ ಎಲ್ಲಾ ಸಂಸ್ಥೆಗಳನ್ನು ಉಪಯೋಗಿಸಿಕೊಳ್ಳುವ ಮುಖಾಂತರ ಕೊರೊನಾ ವಿರುದ್ದ ಒಗ್ಗಟ್ಟಿನಿಂದ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ವೆಂಟಿಲೇಟರ್ಸ್, ಮಾಸ್ಕ್, ಪಿಪಿಇಗಳನ್ನು ತಯಾರಿಸಲು ನಿರ್ದೇಶನ ನೀಡಿದೆ ಎಂದು ರಾಜನಾಥ್ ಸಿಂಗ್ ಅವರು ಹೇಳಿರುವುದಾಗಿ ವರದಿ ತಿಳಿಸಿದೆ.
ಕೊರೊನಾ ಸೋಂಕು ಪ್ರಮಾಣವನ್ನು ಪರಿಶೀಲಿಸಲು ಮನೆಯಿಂದಲೇ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಭಾರತೀಯ ಸೇನೆಗೂ ಕೂಡಾ ರಜೆಗೆ ಕಡಿವಾಣ ಹಾಕಲಾಗಿದೆ. ಇತರ ಪ್ರದೇಶ, ರಾಜ್ಯ, ಊರಿನಿಂದ ಬಂದ ಪ್ರತಿಯೊಬ್ಬ ಯೋಧ, ಸಿಬ್ಬಂದಿಗೂ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದರು.
ಎಲ್ಲಾ ರೀತಿಯಿಂದಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಬ್ ಮರೈನ್ ಹಾಗೂ ಹಡಗುಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ. ಅಲ್ಲಿ ಸಾಮಾಜಿಕ ಅಂತರ ಜಾರಿಗೊಳಿಸಲು ಕಷ್ಟ ಎಂದು ಹೇಳಿದರು.