ಬೆಂಗಳೂರು, ಎ.20 (Daijiworld News/MB) : ಲಾಕ್ಡೌನ್ ನಿರ್ಬಂಧಗಳಲ್ಲಿ ಏ.21 ರ ಮಧ್ಯರಾತ್ರಿಯವರೆಗೆ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ನೀಡಿದೆ. ಭಾನುವಾರ ರಾತ್ರಿ ಎಲ್ಲ ಇಲಾಖೆಗೆಗಳ ಮುಖ್ಯಸ್ಥರು, ಡಿಸಿಗಳಿಗೆ ಈ ಬಗ್ಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರವು ಲಾಕ್ಡೌನ್ನ್ನು ಮೇ 3 ರವರೆಗೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಏ. 20ರ ಬಳಿಕ ಪರಿಸ್ಥಿತಿ ನೋಡಿ ವಿಸ್ತರಿಸುವುದೋ ಅಥವಾ ಸಡಿಲಗೊಳಿಸುವುದೋ ಎಂದು ತೀರ್ಮಾನ ಕೈಗೊಳ್ಳಬಹುದೆಂಬ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು. ಕೋವಿಡ್–19 ಹಾಟ್ಸ್ಪಾಟ್/ ಕ್ಲಸ್ಟರ್/ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡದ ಪ್ರದೇಶಗಳು ಮತ್ತು ಕೊರೊನಾ ಬಾಧಿತವಲ್ಲದ ಜಿಲ್ಲೆಗಳಲ್ಲಿ ಏ.21 ರ ಬಳಿಕ ಲಾಕ್ಡೌನ್ನ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಸೋಮವಾರ ಸಚಿವ ಸಂಪುಟ ಸಭೆ ನಡೆಯಲಿದ್ದು ಆರ್ಥಿಕ ಚಟುವಟಿಕೆಗಳಿಗೆ ಕೊಂಚ ಸಡಿಲಿಕೆ ಮಾಡುವ ಸಾಧ್ಯತೆಗಳು ಇದೆ. ಹಾಗೆಯೇ ಗ್ರಾಮೀಣ ಆರ್ಥಿಕ ಚಟುವಟಿಕೆಗಳು, ಕಾರ್ಮಿಕರಿಗೆ ಉದ್ಯೋಗವಕಾಶ, ನಿರ್ಬಂಧಗಳೊಂದಿಗೆ ದೊಡ್ಡ ಉದ್ಯಮಗಳ ಮರುಚಾಲನೆ ಮಾಡುವ ಸಾಧ್ಯತೆಗಳಿವೆ.