ನವದೆಹಲಿ, ಎ.20 (Daijiworld News/MB) : ಸೋಮವಾರ ದೇಶದ ಗ್ರಾಮೀಣ ಭಾಗಗಳಲ್ಲಿ ಕೆಲವು ವಲಯಗಳಿಗೆ ಲಾಕ್ಡೌನ್ ನಿರ್ಬಂಧ ಸಡಿಲಿಕೆಯಾಗಲಿದ್ದು ಈ ಕುರಿತಾಗಿ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದೆ.
ಈ ಮಾರ್ಗಸೂಚಿಯಂತೆ ವಲಸೆ ಕಾರ್ಮಿಕರು ನೆಲೆಸಿರುವ ರಾಜ್ಯದಲ್ಲೇ ಸಂಚಾರ ಮಾಡಬೇಕು. ಅಲ್ಲಿ ಸಂಚರಿಸಲು ಮಾತ್ರ ಅವರಿಗೆ ಅವಕಾಶ. ಅವರು ಕೆಲಸಕ್ಕಾಗಿ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಸಬೇಕು. ಆ ಬಳಿಕ ಅವರ ಕೌಶಲ್ಯವನ್ನು ಗುರುತಿಸಿ ಅವರಿಗೆ ಸೂಕ್ತವಾದ ಕೆಲಸ ನೀಡಬೇಕು.
ವಲಸೆ ಕಾರ್ಮಿಕರಿಗೆ ಅಂತರ್ ರಾಜ್ಯ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲ. ನಿಗದಿ ಪಡಿಸಿದ ಪ್ರದೇಶಕ್ಕೆ ಬಸ್ನಲ್ಲಿಯೇ ಕರೆದೊಯ್ಯುಬೇಕು. ಹಾಗೆಯೇ ಇದಕ್ಕೂ ಮುನ್ನ ಆರೋಗ್ಯ ಇಲಾಖೆ ನೀಡಿರುವ ಎಲ್ಲಾ ಮಾರ್ಗಸೂಚಿಗಳ ಪಾಲನೆ ಮಾಡಬೇಕು.
ಜಿಲ್ಲಾಡಳಿತವೇ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಾಮಗಾರಿಗಳಿಗೆ ಕೂಲಿಯಾಳುಗಳನ್ನು ಸಾಗಾಟ ಮಾಡುವ ಜವಾಬ್ದಾರಿ ಹೊರಬೇಕು. ಕೂಲಿಕಾರ್ಮಿಕರು ತಾವು ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಪ್ರದೇಶದಲ್ಲೇ ಕೆಲಸ ಮಾಡಬೇಕೆಂದು ತಿಳಿಸಿದರೆ ಆ ಸ್ಥಳ ರಾಜ್ಯದ ಒಳಗಾದ್ದಲ್ಲಿ ಅಲ್ಲಿಗೆ ಕರೆದುಕೊಮಡು ಹೋಗುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು.
ಎಲ್ಲಾ ಕೂಲಿಕಾರ್ಮಿಕರನ್ನು ಸ್ಕ್ಯಾನಿಂಗ್ಗೆ ಒಳಪಡಿಸಬೇಕು. ಅವರಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ಬಳಿಕವೇ ಅವರನ್ನು ಕಾಮಗಾರಿ ಕೆಲಸಕ್ಕೆ ಕರೆದುಕೊಂಡು ಹೋಗಬೇಕು. ಹಾಗೆಯೇ ಅವರನ್ನು ಕರೆದುಕೊಂಡು ಹೋಗುವ ಬಸ್ಗಳಿಗೆ ಕ್ರಿಮಿನಾಶಕ ಸಿಂಪಡಿಸಿ ಶುದ್ಧಗೊಳಿಸಿರಬೇಕು. ಕಾರ್ಮಿಕರ ನಡುವೆ ಅಂತರವಿರುವಂತೆ ಬಸ್ನಲ್ಲಿ ಕೂರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.