ಬೆಂಗಳೂರು, ಏ 20 (Daijiworld News/MSP): ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಬಿಬಿಎಂಪಿ ವಾರ್ಡ್ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಈವರೆಗೂ ಸುಮಾರು 54 ಮಂದಿಯನ್ನು ವಶಕ್ಕೆ ಪಡೆದಿದ್ದು, 4 ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನಲೆ:
ಇಲ್ಲಿ 17 ಮಂದಿ ಸೋಂಕಿತರಿದ್ದು,ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸುಮಾರು 58 ಜನರನ್ನು ಕ್ವಾರೆಂಟೈನ್ ಮಾಡಲೆಂದು ತೆರಳಿದ್ದ ಆರೋಗ್ಯ ಸಿಬ್ಬಂದಿ ಮೇಲೆ ಸ್ಥಳೀಯ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ ಮತ್ತು ಇದನ್ನು ತಡೆಯಲು ಬಂದ ಸೀಮಿತ ಪೊಲೀಸ್ ಪಡೆಗಳ ಮೇಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಮಾತ್ರವಲ್ಲದೆ ರಾತ್ರಿಯಾಗುತ್ತಿದ್ದಂತೆ ಕೆಲ ಶಂಕಿತ ವ್ಯಕ್ತಿಗಳು ರೌಡಿಗಳ ರೀತಿಯಲ್ಲಿ ಅಟ್ಟಹಾಸ ಮೆರೆದಿದ್ದು ಲಾಕ್ ಡೌನ್ ಗಾಗಿ ಹಾಕಲಾಗಿದ್ದ ಚೆಕ್ ಪೋಸ್ಟನ್ನು ಪುಡಿಗೈದಿದ್ದಾರೆ. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಥರಾದರು.ವಾಹನಗಳ ಸಹಿತ ಏಕಾಏಕಿ ಗುಂಪುಕಟ್ಟಿಕೊಂಡು ಬಂದ ಈ ಕಿಡಿಗೇಡಿಗಳು ಪರಿಸ್ಥಿತಿಯ ಲಾಭವನ್ನು ಪಡೆದು ದಾಂಧಲೆ ಎಸಗಿದ್ದಾರೆ .
ಪೊಲೀಸರು, ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ವಿರುದ್ಧ ಹಲ್ಲೆ ಮಾಡಿದ್ದ ಸ್ಥಳೀಯ ಕಿಡಿಗೇಡಿಗಳ ವಿರುದ್ದ ವಿರುದ್ಧ ಇದೀಗ ಪೊಲೀಸರು ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ," ಘಟನೆಯ ಹಿಂದೆ ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅವರ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾನೆ" ಎಂದು ಹೇಳಿದ್ದಾರೆ