ಗುವಾಹಟಿ, ಎ.20 (DaijiworldNews/PY) : ಹಬ್ಬದೂಟಕ್ಕಾಗಿ ಬೇಟೆಗಾರರ ಗುಂಪೊಂದು 12 ಅಡಿ ಉದ್ದದ ಕಾಳಿಂಗ ಸರ್ಪ ಹಾವನ್ನು ಕೊಂದಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದ್ದು, ಸರ್ಪವನ್ನು ಕೊಂದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ
ಕೊರೊನಾದಿಂದಾಗಿ ಲಾಕ್ಡೌನ್ ಆದ ಕಾರಣ ನಮಗೆ ಅಕ್ಕಿಯೂ ಇರಲಿಲ್ಲ ಎಂದು ಒಬ್ಬಾತ ತಿಳಿಸಿದ್ದಾನೆ. ಈ ನಡುವೆ ಕಾಡಿಗೆ ತೆರಳಿದ್ದ ಸಂದರ್ಭ ಕಾಳಿಂಗ ಸರ್ಪ ಕಾಣಿಸಿತ್ತು. ಅದನ್ನು ಹೊಡೆದು ಸಾಯಿಸಿದೆವು ಎಂದು ಇನ್ನೊಬ್ಬ ವಿಡಿಯೋದಲ್ಲಿ ಹೇಳಿದ್ದಾನೆ. ಹಬ್ಬಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಹಾವಿನ ಮಾಂಸವನ್ನು ತುಂಡು ಮಾಡಿ ಶುಚಿಗೊಳಿಸಲು ಬಾಳೆ ಎಲೆಗಳನ್ನು ಇಟ್ಟಿದ್ದರು.
ವಿಡಿಯೋದಲ್ಲಿ ಮೂವರು ಯುವಕರು ತಮ್ಮ ಭುಜದ ಮೇಲೆ ಕಾಳಿಂಗ ಸರ್ಪವನ್ನು ಹಾಕಿಕೊಂಡಿದ್ದು, ಅವರು ಹಾವನ್ನು ಕಾಡಿನಲ್ಲೇ ಕೊಂದಿದ್ದಾರೆ ಎಂದು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾಳಿಂಗ ಸರ್ಪ ಹಾವನ್ನು ಕೊಂದವರ ವಿರುದ್ದ ಪ್ರಕರಣ ದಾಖಲಾಗಿದ್ದು, ಹಾವನ್ನು ಕೊಂದವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಅಧಿಕ ಸಂಖ್ಯೆಯ ಹಾವಿನ ಪ್ರಬೇಧಗಳಿವೆ. ಕಾನೂನಿನ ಪ್ರಕಾರ ಕಾಳಿಂಗ ಸರ್ಪವು ಸಂರಕ್ಷಿತ ಸರೀಸೃಪವಾಗಿದ್ದು, ಅದನ್ನು ಕೊಲ್ಲುವುದು ಅಪರಾಧ ಹಾಗೂ ಜಾಮೀನು ರಹಿತ ಅಪರಾಧವಾಗಿದೆ.