ಮುಂಬೈ, ಎ.20 (Daijiworld News/MB) : ಇಬ್ಬರು ಸಾದು ಸೇರಿದಂತೆ ಮೂವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಗ್ರಾಮದ ಜನರು ಸೇರಿ ಎರಡು ದಿನಗಳ ಹಿಂದೆ ದೊಣ್ಣೆಗಳಿಂದ ಹೊಡೆದು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಗಡ್ಚಿಂಚಾಲೆ ಗ್ರಾಮದಲ್ಲಿ ನಡೆದಿದ್ದು ಪೊಲೀಸರು ಈವರೆಗೆ 101 ಮಂದಿಯನ್ನು ಬಂಧಿಸಿದ್ದಾರೆ.
ಈ ಮೂವರು ಮಕ್ಕಳ ಕಳ್ಳರೆಂಬ ವದಂತಿಯಿಂದಾಗಿ ಗ್ರಾಮಸ್ಥರೆಲ್ಲರೂ ಅವರ ಮೇಲೆ ಹಲ್ಲೆ ಮಾಡಿದ್ದು ಈ ಸಂದರ್ಭದಲ್ಲಿ ತಡೆಯಲು ಬಂದ ಪೊಲೀಸರ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ಇಬ್ಬರು ಸಾಧುಗಳು ಹಾಗೂ ಅವರ ಕಾರು ಚಾಲಕ ಸಾವನ್ನಪ್ಪಿದ್ದು ಇದೀಗ ಗ್ರಾಮಸ್ಥರು ಸಾಧುಗಳಿಗೆ ದೊಣ್ಣೆ, ಕಲ್ಲುಗಳಿಂದ ಹೊಡೆಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ ಸಾಧುಗಳು ತಮ್ಮನ್ನು ರಕ್ಷಿಸಿ ಎಂದು ಪೊಲೀಸರಲ್ಲಿ ಕೇಳುತ್ತಿರುವುದು ಕಂಡು ಬರುತ್ತಿದ್ದು ಹಾಗೆಯೇ ಇನ್ನೊಂದು ವಿಡಿಯೋದಲ್ಲಿ ಗ್ರಾಮಸ್ಥರು ಪೊಲೀಸರ ವಾಹನ, ಸಾಧುಗಳ ವಾಹನವನ್ನು ದ್ವಂಸ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತದೆ.
ಈ ಕುರಿತು ಮಾತನಾಡಿದ ಪಾಲ್ಗರ್ ಜಿಲ್ಲಾಧಿಕಾರಿ ಕೈಲಾಸ್ ಶಿಂದೆ, "ಪೊಲೀಸರು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ್ದು ಹಲ್ಲೆಗೊಳಗಾಗಿದ್ದ ಸಾಧುಗಳು ಸೇರಿದಂತೆ ಮೂವರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಬರಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಗುಂಪು ದಾಲಿ ಮಾಡಿದೆ. ಈ ಸಂದರ್ಭದಲ್ಲಿ ಪೊಲೀಸರಿಗೂ ಗಾಯಗಳಾಗಿದೆ. ಮೂವರನ್ನು ಪೊಲೀಸರು ಗ್ರಾಮಸ್ಥರಿಂದ ತಪ್ಪಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅವರು ಮೃತರಾಗಿದ್ದರು ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಈಗಾಗಲೇ ನಾವು 101 ಜನರನ್ನು ಬಂಧಿಸಿದ್ದೇವೆ. ಯಾವುದೇ ಗ್ರಾಮಸ್ಥರು ವದಂತಿಗಳಿಗೆ ಕಿವಿಕೊಡಬಾರದು, ಯಾರೂ ಕೂಡಾ ಮಕ್ಕಳ ಅಪಹರಣ ಮಾಡಲೆಂದು ಊರಿಗೆ ಬರುವುದಿಲ್ಲ. ಕಾನೂನು ಕೈಗೆತ್ತಿಕೊಂಡ ಗ್ರಾಮಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ವಿಚಾರ ದೇಶದಾದ್ಯಂತ ಬಾರೀ ಸುದ್ದಿಯಾದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಸರ್ಕಾರವು ಪಾಲ್ಗರ್ ಜಿಲ್ಲೆಯಲ್ಲಿ ನಡೆದ ಘಟನೆ ಕುರಿತಾಗಿ ಕ್ರಮ ತೆಗೆದುಕೊಂಡಿದೆ. ಘಟನೆ ನಡೆದ ದಿನದಂದೆ ಇಬ್ಬರು ಸಾಧು, ಒಬ್ಬ ಕಾರು ಚಾಲಕನನ್ನು ಕೊಂದ, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಮಾಡಿದ್ದು, ಈ ಘೋರ, ನಾಚಿಕೆಗೇಡಿನ ಅಪರಾಧ ಕೃತ್ಯದಲ್ಲಿ ಭಾಗಿಯಾದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ಕಾನೂನು ಮೂಲಕ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದೆ.