ಬೆಂಗಳೂರು, ಏ 20 (Daijiworld News/MSP): ಕಳೆದ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅಧಿಕಾರಿಗಳೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಾದರಾಯನಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಹಿಂದೆ ಯಾರೇ ಇದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕೊರೊನಾ ವಿರುದ್ದ ಹೋರಾಟ ಯುದ್ದದಂತೆ, ಇದಕ್ಕೆ ಸಹಕಾರ ನೀಡಿದ, ಗಲಾಟೆ ಮಾಡಿದ ಪುಂಡರ ವಿರುದ್ದ ಕ್ರಮ ಖಂಡಿತಾ. ಸರ್ಕಾರ, ಸರ್ಕಾರದ ಕ್ರಮ, ಅಧಿಕಾರಿಗಳ ವಿರುದ್ಧ ಪುಂಡಾಟ ನಡೆಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಇಡೀ ರಾಜ್ಯಕ್ಕೆ ಲಾಕ್ ಡೌನ್, ಸೀಲ್ ಡೌನ್, ಪೊಲೀಸರ ಕಠಿಣ ಕ್ರಮ, ಪೊಲೀಸ್ ಆಕ್ಷನ್ ಅಂದರೆ ಏನು ಎಂಬುದಾಗಿ ತೋರಿಸುವುದಾಗಿ ಸಚಿವ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಒಟ್ಟು 19 ಕೊರೊನಾ ಸೋಂಕಿತರರು ಕಂಡುಬಂದಿದ್ದಾರೆ. ಈ ಹಿನ್ನಲೆಯಲ್ಲಿ ಜನರ ಜೀವರಕ್ಷಣೆಗಾಗಿ ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಕ್ಲಸ್ಟರ್ ಕ್ವಾರೆಂಟೈನ್ ಮಾಡಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಿ ಈ ಏರಿಯಾದ ಸುತ್ತಳತೆ ಹೆಚ್ಚಿಸಲು, ಆಹಾರ ಒದಗಿಸಲುವ ನಿಟ್ಟಿನಲ್ಲಿ ಸಂಜೆ 7 ಗಂಟೆಯವರೆಗೆ ಸಭೆ ನಡೆಸಲಾಗಿತ್ತು. ಜೊತೆಗೆ ಸೋಂಕಿತರ ಸೆಕೆಂಡರಿ ಸಂಪರ್ಕದಲ್ಲಿದ್ದ 58 ಜನರಿಗೆ ಕ್ವಾರೆಂಟನ್ ಮಾಡಬೇಕಾಗಿತ್ತು. ಮೊದಲು 15 ಮಂದಿ ಅಧಿಕಾರಿಗಳ ತಂಡ ಮಾತುಕತೆಗಾಗಿ ತೆರಳಿದ್ದರು. ಈ ಸಂದರ್ಭ 10 ಮಂದಿ ಕ್ವಾರೆಂಟೈನ್ ಗೆ ತೆರಳಲು ಸಿದ್ದರಿದ್ದರು. ಆದರೆ, ಆಮೇಲೆ ಕೆಲವರು ಬಂದು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿ ಗಲಾಟೆ ನಡೆಸಿದ್ದಾರೆ. ಈ ವೇಳೆ, ಸುಮಾರು 100 ಜನಕ್ಕಿಂತ ಹೆಚ್ಚು ಜನ ಗುಂಪು ಸೇರಿದ್ದಾರೆ. ಪೆಂಡಾಲ್ ಕಿತ್ತಿದ್ದಾರೆ, ಸಿಸಿ ಕ್ಯಾಮರಾ ನಾಶಗೊಳಿಸಿ, ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ದಾಳಿ ನಡೆಸಿ ಪುಂಡಾಟ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.