ನವದೆಹಲಿ, ಎ.20 (DaijiworldNews/PY) : ದೇಶದಲ್ಲಿ ಕೊರೊನಾ ವೈರಸ್ ಪ್ರಭಾವ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾರ್ಗಸೂಚಿಗಳು ದುರ್ಬಲಗೊಳ್ಳದಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರ ಈಗಾಗಲೇ 6 ಅಂತರ್ ಸಚಿವಾಲಯದ ಕೇಂದ್ರ ತಂಡವನ್ನು ರಚಿಸಿದ್ದು, ಈ ತಂಡವು ಆಯಾ ರಾಜ್ಯಗಖ ಹಾಟ್ಸ್ಪಾಟ್ಗಳಲ್ಲಿರುವ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಲಾಕ್ಡೌನ್ ಮುಂದುವರೆಸುವ ಬಗ್ಗೆ ಅಗತ್ಯ ಸೇವೆಗಳ ಕುರಿತು, ಆರೋಗ್ಯ ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ಈ ತಂಡ ಸಲಹೆ ನೀಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದೀಗ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17,000 ಗಡಿ ದಾಟುತ್ತಿದ್ದು, ಈ ಮಧ್ಯೆ ಕೊರೊನಾ ವೈರಸ್ ವಿರುದ್ದ ಹೋರಾಟವನ್ನು ತೀವ್ರವಾಗಿಸಿದ ತೆಲಂಗಾಣ ಸರ್ಕಾರ ಮೆ.7ವರೆಗೂ ಲಾಕ್ಡೌನ್ ಅನ್ನು ವಿಸ್ತರಿಸಿದ್ದು, ಫುಡ್ ಡೆಲಿವರಿ ಸೇವೆಗಳನ್ನು ಕೂಡಾ ಬಂದ್ ಮಾಡಿದೆ.
ಇನ್ನೊಂದೆಡೆ ಲಾಕ್ಡೌನ್ ಅನ್ನು ಕೇರಳ ಸರ್ಕಾರ ಸಡಿಲಗೊಳಿಸಿದ್ದು, ಬುಕ್ ಸ್ಟೋರ್ಗಳು, ರೆಸ್ಟೋರೆಂಟ್, ಸ್ಥಳೀಯ ನೌಕರರು, ಕ್ಷೌರಿಕರು ಕೆಲಸ ಮಾಡಲು ಅನುಮತಿ ನೀಡಿದೆ. ಅದಲ್ಲದೇ, ಗ್ರೀನ್ ಹಾಗೂ ಆರೆಂಜ್ ಝೋನ್ಗಳಲ್ಲಿ ಬಸ್ ಸಂಚಾರವನ್ನು ಪ್ರಾರಂಭಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದು, ವೈರಸ್ ಪ್ರಭಾವ ದೇಶದಲ್ಲಿ ಅಧಿಕವಾಗುತ್ತಲೇ ಇದೆ. ಈ ಹಿನ್ನೆಲೆ ಲಾಕ್ಡೌನ್ ಮಾರ್ಗಸೂಚಿಗಳನ್ನು ದುರ್ಬಲಗೊಳ್ಳದಂತೆ ನೋಡಿಕೊಳ್ಳಿ ಎಂದು ತಿಳಿಸಿದೆ.
ಕೆಲ ಉದ್ಯಮಗಳಿಗೆ ಕೇರಳ ಸರ್ಕಾರ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು, ಇಂತಹ ಆದೇಶಗಳು ಕೇಂದ್ರ ಗೃಹ ಸಚಿವಾಲಯ ಎ.15ರಂದು ನೀಡಿದ್ದ ಆದೇಶಗಳಿಗೆ ವಿರುದ್ದವಾಗಿದೆ ಎಂದು ಹೇಳಿದ್ದಾರೆ.
ಜೈಪುರ, ಕೋಲ್ಕತಾ, ಮುಂಬೈ, ಪುಣೆ, ಇಂದೋರ್ ಹಾಗೂ ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಲ್ಲಿ ಕೊರೊನಾ ಗಂಭೀರವಾಗಿದ್ದು, ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಕೂಡ ಉಲ್ಲಂಘಿಸಿದ್ದಾರೆ. ನಗರ ಪ್ರದೇಶಗಳ ವಾಹನ ಸಂಚಾರವು ಮುಂದುವರೆದಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.