ಬೆಂಗಳೂರು, ಏ 20 (Daijiworld News/MSP): ಪಾದರಾಯನಪುರಕ್ಕೆ ಹೋಗುವ ಮುನ್ನ ತಮ್ಮ ಗಮನಕ್ಕೆ ವಿಷಯ ತರಬೇಕಿತ್ತೆಂದು ಶಾಸಕ ಜಮೀರ್ ಅಹಮದ್ ನೀಡಿರುವ ಹೇಳಿಕೆ ಕುರಿತಂತೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಕೆಲಸಕ್ಕೆ ಜಮೀರ್ ಅಹಮದ್ ಅನುಮತಿ ಯಾಕ್ರೀ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆಸಿದ ಗಲಾಟೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ತುರ್ತು ಸಭೆ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ಜಮೀರ್ ಅಹಮದ್ ಅವರ ಗಮನಕ್ಕೆ ತರಲು ಅವರು ಯಾರು? ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸರ್ಕಾರಕ್ಕೆ ತಿಳಿದಿದೆ . ಅವರ ಈ ಹೇಳಿಕೆ ಗಮನಿಸಿದ್ರೆ, ಅವರೇ ಪ್ರಚೋದನೆ ನೀಡುತ್ತಿದ್ದಾರೆಂದು ಭಾವಿಸಬೇಕೆ? ಎಂದು ಶಾಸಕ ಜಮೀರ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿಯೇ ಇಂತಹ ಘಟನೆ ನಡೆದಿಲ್ಲ, ಈ ರೀತಿಯ ಗುಂಡಾ ನಡವಳಿಕೆ ಸಹಿಸುವ ಪ್ರಶ್ನೆಯೇ ಇಲ್ಲ, ಇದರಲ್ಲಿ ಯಾವ ಧರ್ಮ, ಜಾತಿ, ಸಮುದಾಯ ಎಂದಿಲ್ಲ ಗೂಂಡಾಗಿರಿ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಈಗಾಗಲೇ 54 ಮಂದಿಯನ್ನು ಬಂಧಿಸಲಾಗಿದೆ. ಘಟನೆಗೆ ಕಾರಣರಾದ ಮತ್ತಷ್ಟು ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದಿದ್ದಾರೆ.