ಬೆಂಗಳೂರು, ಎ.20 (Daijiworld News/MB) : ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗುವುದಿಲ್ಲ. ಮೇ. 3 ರವರೆಗೆ ಲಾಕ್ಡೌನ್ ಮುಂದುವರೆಯಲಿದೆ. ಕೃಷಿ ಹಾಗೂ ತೋಟಗಾರಿಕೆಯ ಚಟುವಟಿಕೆಗಳಿಗಷ್ಟೇ ವಿನಾಯಿತಿ ನೀಡಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಈ ಕುರಿತು ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಕೇರಳ, ಉತ್ತರಪ್ರದೇಶ ಮಾದರಿಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆಯ ಸುಗ್ರೀವಾಜ್ಞೆ ತರಲು ಸರ್ಕಾರ ತೀರ್ಮಾನಿಸಿದೆ. ಇದರ ಪೂರ್ವಭಾವಿಯಾಗಿ ಸುಗ್ರೀವಾಜ್ಞೆ ಇಂದಿನಿಂದಲ್ಲೇ ಜಾರಿಯಾಗಲಿದೆ ಎಂದು ತಿಳಿಸಿದರು.
ಸುಳ್ಳು ಸುದ್ದಿ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ ಆಶಾ ಕಾರ್ಯಕರ್ತೆಯರು, ಪೊಲೀಸರು ವೈದ್ಯರ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಹಾಗೂ ಉದ್ದೇಶ ಪೂರ್ವಕವಾಗಿ ಸೋಂಕು ಹರಡುವವರ ವಿರುದ್ಧವಾಗಿ ಗೂಂಡಾಕಾಯ್ದೆಯ ಅನ್ವಯ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಲ್ಲಿ ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಆಸ್ತಿ ಮುಟ್ಟುಗೋಲು ಹಾಕಲೂ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಮೇ ಮೂರರವರೆಗೆ ಲಾಕ್ಡೌನ್ ಪಾಲಿಸಬೇಕು. ರಾಜ್ಯದಲ್ಲಿ ಯಾವುದೇ ಕೈಗಾರಿಕೆಗಳನ್ನು ಆರಂಭ ಮಾಡಲು ಅವಕಾಶವಿಲ್ಲ. ಇಷ್ಟು ದಿನ ಹೇಗೆ ಇತ್ತು ಆ ರೀತಿಯಲ್ಲೇ ಲಾಕ್ಡೌನ್ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಕೇಂದ್ರದಿಂದ ಹೊಸ ಮಾರ್ಗಸೂಚಿ ಬಂದಲ್ಲಿ ಮುಖ್ಯಮಂತ್ರಿ ನೇತೃತ್ವದ ಟಾಸ್ಕ್ ಪೋರ್ಸ್ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಲಾಕ್ಡೌನ್ ಉಲ್ಲಂಘನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಸೇವೆಯಲ್ಲಿರುವವರಿಗೆ ಸಹಕರಿಸದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.