ಬೆಂಗಳೂರು, ಎ.20 (DaijiworldNews/PY) : ಕೊರೊನಾ ಲಾಕ್ಡೌನ್ ಗರ್ಭಿಣಿ ಮಹಿಳೆಯೊಬ್ಬರು ಆಸ್ಪತ್ರೆ ಹುಡುಕಾಡುತ್ತಾ 5 ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಆಸ್ಪತ್ರೆ ಸಿಗದೇ ಡೆಂಟಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಗರ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ.
ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ಸಂದರ್ಭ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ದೊರಕದ ಕಾರಣ ಹೆರಿಗೆ ನೋವಿನ ನಡುವೆಯೂ ತನ್ನ ಪತಿಯ ಸಹಾಯದಿಂದ ಲೊಟ್ಟೆಗೊಲ್ಲಹಳ್ಳಿಯಿಂದ ದೊಡ್ಡ ಬೊಮ್ಮಸಂದ್ರದವರೆಗೂ ನಡೆದುಕೊಂಡೇ ಬಂದಿದ್ದಾರೆ.
ಆಸ್ಪತ್ರೆ ಸಿಗದೇ ಇದ್ದ ಕಾರಣ ಆಕೆಯ ಪತಿ ಕೊನೆಗೆ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಡೆಂಟಲ್ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ಹೆರಿಗೆ ಮಾಡಿಸಿದ ದಂತ ವೈದ್ಯೆ ರಮ್ಯಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಂತ ವೈದ್ಯೆ ಡಾ.ರಮ್ಯಾ, ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆಯಿಂದ ಸುಮಾರು ೫ ಕಿ.ಮೀ ಕಾಲ್ನಡಿಗೆಯಲ್ಲೇ ನಡೆದುಕೊಂಡು ಬಂದಿದ್ದಾರೆ. ಆದರೆ, ದುರಾದೃಷ್ಟವಶಾತ್ ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿಲ್ಲ. ಬಳಿಕ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿ ರಕ್ತದೊತ್ತಡ ಹೆಚ್ಚಾಗಿತ್ತು. ಜೊತೆಗೆ ಮಗು ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ವಲ್ಪ ಸಮಯದ ಬಳಿಕ ಮಗು ಪ್ರತಿಕ್ರಿಯೆ ನೀಡಿತು. ನಂತರ ಅವರನ್ನು ಆ್ಯಂಬುಲೆನ್ಸ್ ಮೂಲಕ ಕೆ.ಸಿ. ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ತಿಳಿಸಿದರು.