ನವದೆಹಲಿ, ಎ.20 (DaijiworldNews/PY) : ಕೊರೊನಾ ವಿರುದ್ದದ ಹೋರಾಟದ ಭಾಗವಾಗಿ ವಿಮಾನ ಸೇವೆಯನ್ನು ದೇಶದಲ್ಲಿ ನಿರ್ಬಂಧಿಸಲಾಗಿದೆ. ಕೊರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಎನ್ನುವ ವಿಶ್ವಾಸ ಮೂಡಿದ ಬಳಿಕ ಹಾಗೂ ಕೊರೊನಾ ವೈರಸ್ನಿಂದ ದೇಶಕ್ಕೆ ಹಾಗೂ ಜನತೆಗೆ ಯಾವುದೇ ಅಪಾಯವಿಲ್ಲ ಎಂದು ದೃಢಪಟ್ಟ ಬಳಿಕವೇ ವಿಮಾನ ಸೇವೆಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸೋಮವಾರ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ವಿಮಾನಯಾನಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಮುಕ್ತಾಯಗೊಂಡ ನಂತರ ವಿಮಾನ ಸೇವೆಯ ಮೇಲಿನ ನಿರ್ಬಂಧ ತೆರವುಗೊಳಿಸುವ ವಿಚಾರವನ್ನು ಪರಿಗಣಿಸಲಾಗುವುದು ಎಂದು ನಾನು ಮೊದಲೇ ತಿಳಿಸಿದ್ದೆ ಎಂದರು.
ಇಲ್ಲಿಯವರೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭಿಸುವ ಕುರಿತು ನಿರ್ಧಾರವನ್ನು ತೆಗೆದುಕೊಂಡಿಲ್ಲಎಂದು ಎ.18ರಂದು ನಾನು ತಿಳಿಸಿದ್ದೆ. ಎ.19ರಂದು ನಾನು ಈ ಬಗ್ಗೆ ಪುನಃ ಹೇಳಿದ್ದೆ. ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿತ್ತು. ಆದರೂ, ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ಕೆಲವು ವಿಮಾನ ಸಂಸ್ಥೆಗಳು ಬುಕಿಂಗ್ ಪ್ರಾರಂಭಿಸಿದ್ದವು ಎಂದು ಟ್ವೀಟ್ ಮೂಲಕ ಅವರು ತಿಳಿಸಿದ್ದಾರೆ.