ನವದೆಹಲಿ, ಎ.20 (DaijiworldNews/PY) : ಶಾಸಕ ಸ್ಥಾನ ಎನ್ನುವುದು ಜವಾಬ್ದಾರಿಯುತ ಸ್ಥಾನ, ಆ ಸ್ಥಾನದಲ್ಲಿ ಕುಳಿತು ತಪ್ಪಿತಸ್ಥರ ಪರ ಮಾತನಾಡುವುದು ಗಮನಿಸಿದರೇ ಇದರಲ್ಲಿ ಜಮೀರ್ ಅಹ್ಮದ್ ಪಾತ್ರ ಸ್ಪಷ್ಟವಾಗಿದೆ. ಜಮೀರ್ ಕಾರಣದಿಂದಲೇ ಆ ಕ್ಷೇತ್ರದ ಪರಿಸ್ಥಿತಿ ಹೀಗಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ. ಜಮೀರ್ ಕಾರಣದಿಂದಲೇ ಆ ಕ್ಷೇತ್ರದ ಪರಿಸ್ಥಿತಿ ಹೀಗಾಗಿದೆ ಎಂದರು.
ಆಶಾಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದ ಸಂದರ್ಭ ಕಠಿಣ ಕ್ರಮಕೈಗೊಳ್ಳಬೇಕಾಗಿತ್ತು. ಆ ಘಟನೆಯನ್ನು ಲಘುವಾಗಿ ಪರಿಗಣಿಸಿದ ಕಾರಣ ಈ ಘಟನೆ ನಡೆದಿದೆ. ಇದು ಒಂದು ಪೂರ್ವನಿಯೋಜಿತ ಕೃತ್ಯ. ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಗೃಹ ಸಚಿವರು ಕಠೋರ ತೀರ್ಮಾನಗಳಿಗೆ ಸೂಚಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಹೇಳಿದರು
ಶಾಸಕ ಸ್ಥಾನದಲ್ಲಿ ಜಮೀರ್ ಅಹ್ಮದ್ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ಗೌರವದ ಗಂಧ ಗಾಳಿ ತಿಳಿದಿದ್ದರೆ ರಾಜೀನಾಮೆ ಕೇಳಬಹುದಿತ್ತು. ರಾಜಕೀಯ ಅವಕಾಶಕ್ಕಿರುವ ಜನರಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದರು.