ಬೆಂಗಳೂರು, ಏ 20 (DaijiworldNews/SM): ಪಾದರಾಯನಪುರ ವಾರ್ಡ್ನಲ್ಲಿ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿದೆ. ಅಲ್ಲಿ ಸಂಭವಿಸಿದ ಅಹಿತಕರ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವುದು ಹಾಗೂ ಇದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸುವುದಾಗಿ ಶಾಸಕ ಜಮೀರ್ ಅಹಮ್ಮದ್ ತಿಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ ಖಂಡನೀಯ. ಇಂತಹ ಘಟನೆ ನನ್ನ ಕ್ಷೇತ್ರ ಮಾತ್ರವಲ್ಲದೆ, ಎಲ್ಲಿಯೂ ನಡೆಯಬಾರದು. ಜನರು ತಾಳ್ಮೆ ಕಳೆದುಕೊಂಡು ವರ್ತಿಸಬಾರದು. ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಹಕರಿಸಿ ಸೂಕ್ತ ತನಿಖೆಗೆ ಅವಕಾಶ ಕಲ್ಪಿಸಿಕೊಡಬೇಕು. ಆ ಮೂಲಕ ಕೊರೊನಾ ಹೊಡೆದೋಡಿಸಲು ಒಗ್ಗಟ್ಟಿನ ಮಂತ್ರ ಸಾರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಘಟನೆಗೆ ತಪ್ಪುಮಾಹಿತಿ ಪ್ರಮುಖ ಕಾರಣ. ಅಲ್ಲಿನ ಜನರನ್ನು ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ಸಿಬ್ಬಂದಿ ರಾತ್ರಿ ಹೋಗಿದ್ದ ಕಾರಣ ಜನ ಗೊಂದಲಕ್ಕೀಡಾಗಿ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ಶಾಸಕ ಜಮೀರ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.