ಬೆಂಗಳೂರು, ಎ.21 (Daijiworld News/MB) : ರಾಜ್ಯ ಸರ್ಕಾರ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿಯಲ್ಲಿ ಮೂರು ತಿಂಗಳು ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ವಿತರಿಸಲು ತೀರ್ಮಾನಿಸಿದೆ.
ಈ ನಿರ್ಧಾರವನ್ನು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ವಿತರಣೆ ಮಾಡಲು ತೀರ್ಮಾನಿಸಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಮುಂದಿನ ಮೂರು ತಿಂಗಳ ಅವಧಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ವಿತರಿಸಲಿದೆ. ಸರ್ಕಾರ ಇದಕ್ಕಾಗಿ ₹27.52 ಕೋಟಿ ವ್ಯಯ ಮಾಡಲಿದ್ದು ಸುಮಾರು 1 ಲಕ್ಷ ಫಲಾನುಭವಿಗಳಿಗೆ ಇದರಿಂದ ಉಪಯೋಗವಾಗಲಿದೆ ಎಂದು ತಿಳಿಸಿದರು.
ಹಾಗೆಯೇ ಸಚಿವ ಸಂಪುಟವು ಜೀವಾವಧಿ ಶಿಕ್ಷೆಗೊಳಗಾಗಿ 14 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಅಥವಾ 10 ವರ್ಷ ಶಿಕ್ಷೆ ಅನುಭವಿಸಿದ ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ನಿಯಮಕ್ಕೆ ಅನುಮೋದನೆ ನೀಡಿದೆ.
ಈ ಹಿಂದೆ 46 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದ ಸಚಿವ ಸಂಪುಟ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನದಿ ನೀರಿನ ಹಂಚಿಕೆ ವಿರುದ್ಧದ ಹೋರಾಟ, ಟಿಪ್ಪುಜಯಂತಿ ಸಂದರ್ಭದಲ್ಲಿ ನಡೆದ ಗಲಭೆ, ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಗಲಭೆ, ಕನ್ನಡ ಪರ ಹೋರಾಟಗಳ ವೇಳೆ ದಾಖಲಾಗಿದ್ದ ಮೊಕದ್ದಮೆಗಳ ಪೈಕಿ 152 ಮೊಕದ್ದಮೆ ಹಿಂದಕ್ಕೆ ಪಡೆಯಲು ತೀರ್ಮಾನಿಸಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು ಇದಕ್ಕಾಗಿ ₹137 ಕೋಟಿ ಭರಿಸಲಾಗುತ್ತದೆ. ಸುಮಾರು 2,800 ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಇದರ ಪ್ರಯೋಜನ ಸಿಗಲಿದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಕೇರಳ– ಕರ್ನಾಟಕ ಗಡಿ ರಸ್ತೆ ಅಭಿವೃದ್ಧಿ. ಇದಕ್ಕಾಗಿ ಕೇಂದ್ರದ ಪಾಲು ₹1,274 ಕೋಟಿ ಒಳಗೊಂಡಂತೆ ₹2,729.66 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.
ಸುಪ್ರೀಂಕೋರ್ಟ್ನಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ಗೆ ಸೇರಿದ ಜಾಗವು ಕಂದಾಯ ಇಲಾಖೆಗೆ ಸೇರಿದ್ದೋ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೋ ಎಂಬ ದಾವೆ ಇತ್ಯರ್ಥವಾಗಿದ್ದು ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎಂಬ ತೀರ್ಪನ್ನು ಸಂಪುಟ ಸಭೆ ಅಂಗೀಕರಿಸಿದೆ.
ಇನ್ನು ಮುಂದೆ ನಿಗಮ–ಮಂಡಳಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯುದಿಲ್ಲ. ನಿಗಮ–ಮಂಡಳಿಗಳ ನೌಕರರನ್ನು ಇನ್ನು ಮುಂದೆ ಸರ್ಕಾರಿ ನೌಕರರು ಎಂದು ಪರಿಗಣಿಸುವುದಿಲ್ಲ.ಈ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆ ನಿರ್ಧಾರಿಸಿದೆ.
ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿ ಬ್ಯಾಂಕುಗಳಲ್ಲಿ ರೈತರ ಫಸಲುಗಳಿಗೆ ಮಾಡಿದ ವಿಮೆಗೆ ರಾಜ್ಯ ಸರ್ಕಾರದ ಪಾಲಿನ 2016 ರ ಸಾಲಿನ ವಿಮಾ ಮೊತ್ತ ₹18.59 ಕೋಟಿ ಭರಿಸಲು ಒಪ್ಪಿಗೆ ಸೂಚಿಸಲಾಗಿದೆ.