ನವದೆಹಲಿ, ಏ 21 (Daijiworld News/MSP):: ಭಾರತದಲ್ಲಿರುವ ಶೇ.80 ರಷ್ಟು ಕೊರೊನಾ ಪ್ರಕರಣಗಳು ರೋಗಲಕ್ಷಣ ರಹಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದಕ್ಕೆ ಉಪ್ಪಿನಂಗಡಿ ಮತ್ತು ಬಂಟ್ವಾಳದ ಎರಡು ಪ್ರಕರಣಗಳೇ ಜ್ವಲಂತ ಉದಾಹರಣೆ.
ಕೊರೊನಾ ಸೋಂಕು ತಗುಲಿರುವ ಬಹುತೇಕ ವ್ಯಕ್ತಿಗಳಿಗೆ ಯಾವುದೇ ರೋಗದ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ. ಅಥವಾ ಸಣ್ಣ ಪ್ರಮಾಣದ ಲಕ್ಷಣಗಳು ಗೋಚರಿಸುತ್ತವೆ ಇದೇ ಆತಂಕಕಾರಿ ವಿಷಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕೊರೊನಾ ಎಲ್ಲಿ ಯಾವಾಗ ಹೇಗೆ ಹರಡುತ್ತದೆ ಎಂಬುವುದನ್ನು ಊಹಿಸಲು ಆಗದ ಮಟ್ಟಿಗೆ ಅದರ ಸ್ವರೂಪ ಬದಲಾಗುತ್ತಲೇ ಹೋಗುತ್ತಿದೆ. ದೇಶದ ಒಟ್ಟಾರೆ ಸೋಂಕುಪೀಡಿತರ ಪೈಕಿ ಶೇ.80 ಮಂದಿಗೆ ಕೊರೊನಾ ರೋಗದ ಲಕ್ಷಣಗಳೇ ಕಂಡುಬಂದಿಲ್ಲ. ಹೀಗಾಗಿ ಸೋಂಕು ವಾಹಕರು ತಮಗರಿವಿಲ್ಲದಂತೆ ಇತರರಿಗೂ ಸೋಂಕು ಪ್ರಸಾರ ಮಾಡುತ್ತ ಸಾಗುತ್ತಿದ್ದಾರೆ. ಲಕ್ಷಣ ರಹಿತರು ಹೆಚ್ಚಾಗಿ ಉತ್ತಮ ರೋಗ ನಿರೋಧಕ ಶಕ್ತಿ ಇರುವ ಯುವ ಜನರಾಗಿರುತ್ತಾರೆ, ಹೆಚ್ಚಾಗಿ ಇವರು 20 ರಿಂದ 45 ವರ್ಷದೊಳಗಿನವರು ಅಥವಾ ಮಧ್ಯವಯಸ್ಕರಾಗಿದ್ದಾರೆ ಅವರು ಕೆಲವು ನಿರ್ದಿಷ್ಟ ಜೌಷಧಿ ಸೇವನೆ ಮಾಡುವವರಾಗಿರುತ್ತಾರೆ. ರೋಗಲಕ್ಷಣಗಳಿಲ್ಲದ ಜನರಿಂದ ಸೋಂಕು ಇನ್ನಷ್ಟು ಜನರಿಗೆ ಸುಲಭವಾಗಿ ಹರಡುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.