ಕಲಬುರ್ಗಿ, ಏ 21 (Daijiworld News/MSP): ಕಲಬುರ್ಗಿಯಲ್ಲಿ ಕೊರೊನಾಗೆ ನಾಲ್ಕನೇ ಬಲಿಯಾಗಿದೆ. 80 ವರ್ಷದ ವೃದ್ಧರೊಬ್ಬರು ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದು ವರದಿಯಲ್ಲಿ ಕೋವಿಡ್ -19 ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.
ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಅವರ ವರದಿ ಬಂದಿದ್ದು, ಕೋವಿಡ್ 19 ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 9ರಂದು ನಗರದ ಕೆ ಎನ್ ಝಡ್ ಫಂಕ್ಷನ್ ಹಾಲ್ ಬಳಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕಿ ಅವರು ಕೊರೊನಾಗೆ ಬಲಿಯಾಗಿದ್ದರು. ಸೋಮವಾರ ಬಲಿಯಾದ 80 ವರ್ಷದ ವೃದ್ಧನಂತೆ ಸಿದ್ದಿಕಿ ಅವರ ವೈದ್ಯಕೀಯ ವರದಿಯೂ ಅವರು ಸಾವಿಗೀಡಾದ ನಂತರವೇ ಬಂದಿತ್ತು. ಏಪ್ರಿಲ್ 7ರಂದು 65 ವರ್ಷದ ಹಣ್ಣಿನ ವ್ಯಾಪಾರಿ, ಏಪ್ರಿಲ್ 13 ರಂದು 55 ವರ್ಷದ ಬಟ್ಟೆ ವ್ಯಾಪಾರಿ ಈ ಸೋಂಕಿನಿಂದ ಕಲಬುರ್ಗಿಯಲ್ಲಿ ಸಾವನ್ನಪ್ಪಿದ್ದರು.