ರಾಮನಗರ, ಎ.21 (Daijiworld News/MB) : ಪಾದರಾಯನಪುರ ಆರೋಪಿಗಳಿಗೆ ರಾಮನಗರ ಜಿಲ್ಲಾ ಕಾರಾಗೃಹವು ಕ್ವಾರಂಟೈನ್ ಕೇಂದ್ರವಾಗಿ ಬದಲಾಯಿಸಲಾಗುತ್ತಿದೆ.
ಪ್ರಸ್ತುತ ಈ ಜೈಲಿನಲ್ಲಿ 177 ಕೈದಿಗಳು ಇದ್ದು ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡುವ ಕಾರ್ಯ ಆರಂಭಗೊಂಡಿದ್ದು ಮಧ್ಯಾಹ್ನದ ಬಳಿಕ ಪಾದರಾಯನಪುರ ಪ್ರಕರಣದ 54 ಆರೋಪಿಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಕ್ವಾರಂಟೈನ್ ಕೇಂದ್ರದ ರೀತಿಯಲ್ಲೇ ಆರೋಪಿಗಳ ಆರೋಗ್ಯ ತಪಾಸಣೆ ಮತ್ತು ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಜೈಲಿನಲ್ಲಿರುವ ಕೈದಿಗಳನ್ನು ಕರೆದೊಯ್ಯಲು 4 ಕೆಎಸ್ಆರ್ಪಿ ವಾಹನಗಳು, 10 ಬಿಎಂಟಿಸಿ ಬಸ್ಗಳು ಬಂದಿದ್ದು ಅವರ ಸ್ಥಳಾಂತರವಾದ ಬಳಿಕ ಜೈಲಿನ ಆವರಣವನ್ನು ಸ್ವಚ್ಛಗೊಳಿಸಲಾಗುತ್ತದೆ.
ಇನ್ನು ಬೆಂಗಳೂರು ಪೊಲೀಸರು ಈ ಪ್ರಕರಣದ ಮತ್ತಷ್ಟು ಆರೋಪಿಗಳನ್ನು ಬಂಧನ ಮಾಡಿದ್ದು ಅವರನ್ನೂ ಇದೇ ಜೈಲಿಗೆ ಕರೆತರುವ ಸಾಧ್ಯತೆ ಇದೆ.
ನಗರದ ಒಳಗೆ ಈ ರಾಮನಗರ ಕಾರಾಗೃಹವು ಇದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ಹತ್ತಿರವಾಗಿದೆ. ಅಷ್ಟು ಮಾತ್ರವಲ್ಲದೇ ಈವರೆಗೆ ಒಂದೂ ಕೊರೊನಾ ಪ್ರಕರಣಗಳು ಇಲ್ಲಿ ಪತ್ತೆಯಾಗಿಲ್ಲ. ಹೀಗಿರುವಾಗ ಕೊರೊನಾ ಶಂಕಿತರನ್ನು ಒಳಗೊಂಡತೆ ಹೊರ ಜಿಲ್ಲೆಯ ಜನರನ್ನು ಇಲ್ಲಿಗೆ ಕರೆತರುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.