ನವದೆಹಲಿ, ಎ.21 (Daijiworld News/MB) : ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿಯನ್ನು ದೆಹಲಿಯಲ್ಲಿ ನೀಡಲಾಗಿದ್ದು ಗಂಭೀರ ಸ್ಥಿತಿಗೆ ತಲುಪಿದ್ದ ಈ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ.
ಒಂದು ವಾರದ ಹಿಂದಿನಿಂದ ದೆಹಲಿಯಲ್ಲಿ ಈ ಚಿಕಿತ್ಸೆಯನ್ನು ಆರಂಭ ಮಾಡಲಾಗಿದ್ದು ಇದೀಗ ಈ ಚಿಕಿತ್ಸೆ ಯಶಸ್ವಿಯಾಗಿದೆ.
ಏಡ್ಸ್ ರೋಗಕ್ಕೆ ನೀಡುವ ಔಷಧ ಕೊರೊನಾಗೆ ಸೂಕ್ತ ಎಂಬುದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರು ಮಲೇರಿಯಾದ ಔಷಧವನ್ನು ಉಪಯುಕ್ತ ಎಂದು ಹೇಳುತ್ತಾರೆ. ಇನ್ನು ಕೆಲವರು ಆಯುರ್ವೇದ ಚಿಕಿತ್ಸೆಯತ್ತ ಮುಖಮಾಡಿದ್ದಾರೆ. ಈ ನಡುವೆ ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಮಾಡಿದ ಪ್ಲಾಸ್ಮಾ ಥೆರಪಿಯಿಂದಾಗಿ ಸೋಂಕಿತ ವ್ಯಕ್ತಿ ಚೇತರಿಸಿಕೊಂಡಿದ್ದಾರೆ.
ನಮ್ಮ ರಕ್ತದಲ್ಲಿ ಪ್ಲಾಸ್ಮಾ ಮತ್ತು ರಕ್ತಕಣಗಳು ಇದ್ದು ಈ ರಕ್ತಗಳನ್ನು ಬೇರ್ಪಡಿಸಿದಾಗ ಸಿಗುವ ದ್ರವವೇ ಪ್ಲಾಸ್ಮಾ ಆಗಿರುತ್ತದೆ. 3-5 ವ್ಯಕ್ತಿಗಳಿಗೆ ಒರ್ವ ವ್ಯಕ್ತಿಯಿಂದ ತೆಗೆದ ಪ್ಲಾಸ್ಮಾದಿಂದ ಚಿಕಿತ್ಸೆ ನೀಡಬಹುದು ಎಂದು ವರದಿ ತಿಳಿಸಿದೆ.