ಬೆಂಗಳೂರು, ಏ 21 (Daijiworld News/MSP): ದೇಶಾದ್ಯಂತ ಮಾರಕ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಮಹಾರಾಷ್ಟ್ರದಲ್ಲಿ 53 ಪತ್ರಕರ್ತರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಇತರೆ ನಗರಗಳ ಪತ್ರಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಮುಂಬೈ ಪತ್ರಕರ್ತರಿಗೆ ಕೊರೊನಾ ತಗುಲಿರುವ ಘಟನೆ ಬಳಿಕ ಇದೀಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಮುಂದಾಗಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯದಲ್ಲೂ ಪತ್ರಕರ್ತರಿಗೆ ಕೋವಿಡ್ -19 ಟೆಸ್ಟ್ ಮಾಡಿಸಲು ಸಚಿವ ಸುರೇಶ್ ಕುಮಾರ್ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು ಇದಕ್ಕೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ವಾರ್ತಾ ಇಲಾಖೆ ಆಯುಕ್ತರು ತಕ್ಷಣ ಎಲ್ಲ ಪತ್ರಕರ್ತರಿಗಾಗಿ ಕೊರೊನಾ ತಪಾಸಣಾ ಶಿಬಿರ ಏರ್ಪಡಿಸುವಂತೆ ಸೂಚನೆ ನೀಡಿದ್ದಾರೆ.
ಮಾಧ್ಯಮ ಸಿಬ್ಬಂದಿಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಗಲಿರುಳು ಸುದ್ದಿ ಬಿತ್ತರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಕಳೆದ ಕೆಲ ದಿನಗಳ ಹಿಂದೆ ಜರ್ನಲಿಸ್ಟ್ ಗಳಿಗಾಗಿಯೇ ಮಹಾರಾಷ್ಟ್ರ ಸರ್ಕಾರದಿಂದ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಇದರಲ್ಲಿ 167ಕ್ಕೂ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಿ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 53 ಜನರಿಗೆ ಸೋಂಕು ತಗುಲಿರುವುದು ಧೃಡಪಟ್ಟಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಜ್ಯ ಸರ್ಕಾರ ಪತ್ರಕರ್ತರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶಿಸಿದೆ.