ನವದೆಹಲಿ, ಎ.21 (Daijiworld News/MB) : ಭಾರತದ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು, ಎಲ್ಲ ವರ್ಗದವರು ಇಲ್ಲಿ ಸಮೃದ್ಧವಾಗಿ ಬದುಕುತ್ತಿದ್ದಾರೆ. ಅವರಿಗೆ ಭಾರತ ಸ್ವರ್ಗ, ಇಲ್ಲಿ ಅವರ ಆರ್ಥಿಕತೆ, ಧಾರ್ಮಿಕ ಹಕ್ಕುಗಳು ಸುರಕ್ಷಿತವಾಗಿದೆ. ಈ ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುವವರು ಭಾರತದ ಮುಸ್ಲಿಮರ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಇಸ್ಲಾಮ್ ಒಕ್ಕೂಟ 'ಇಸ್ಲಾಮಿಕ್ ಸಹಕಾರ ಸಂಸ್ಥೆ' (ಒಐಸಿ) ಭಾರತದಲ್ಲಿ ಮುಸ್ಲಿಮರ ವಿರುದ್ಧವಾದ ಘಟನೆಗಳು ನಡೆಯುತ್ತಿದೆ. ಮುಸ್ಲಿಮರ ವಿರುದ್ಧ ದ್ವೇಷ, ಭೀತಿ, ಪೂರ್ವಾಗ್ರಹಗಳು ಇರುವ ಇಸ್ಲಾಮೋಫೋಬಿಯಾದಂಥ ಘಟನೆಗಳು ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಭಾರತವು ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ದೇಶದಲ್ಲಿ ಇಸ್ಲಾಮೋಫೋಬಿಯಾದಂಥ ಘಟನೆಗಳನ್ನು ತಡೆಯಬೇಕು ಎಂದು ಆಗಹ್ರಿಸಿದ್ದು ಈ ಕುರಿತಾಗಿ ಮಾಧ್ಯಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಖ್ವಿ ಅವರು, ನಾವು ನಮ್ಮ ಕೆಲಸವನ್ನು ಒಮ್ಮದದಿಂದ ಮಾಡುತ್ತಿದ್ದೇವೆ. ಈ ದೇಶದ ಪ್ರಧಾನಿ ಈ ದೇಶದ 130 ಕೋಟಿ ಜನರ ಹಕ್ಕುಗಳು ಮತ್ತು ಹಿತದ ಬಗ್ಗೆ ಎಂದಿಗೂ ಮಾತನಾಡುತ್ತಾರೆ. ಆದರೆ ಇದು ಯಾರಿಗಾದರೂ ಕಾಣದೆ ಹೋದಲ್ಲಿ ಅದು ಅವರ ಸಮಸ್ಯೆ ಹೊರತು ನಮ್ಮದ್ದಲ್ಲ. ಎಂದು ಹೇಳಿದ್ದಾರೆ.
ಜಾತ್ಯತೀತತೆ ಮತ್ತು ಸಾಮರಸ್ಯ ಎಂಬುದು ಭಾರತದಲ್ಲಿ ಕೇವಲ ರಾಜಕೀಯ ಕಲ್ಪನೆಯಲ್ಲ. ಭಾರತ ಮತ್ತು ಭಾರತೀಯರಿಗೆ ಅದು ಪರಿಪೂರ್ಣ ಭಾವನೆ ಎಂದು ಹೇಳಿದ್ದಾರೆ.