ಬೆಂಗಳೂರು,ಏ 21 (Daijiworld News/MSP): ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಹಾಗೂ ಸಿಲ್ ಡೌನ್ ಉಲ್ಲಂಘಿಸಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ನಗರದ ಪಾದರಾಯನಪುರದಲ್ಲಿ ಗಲಭೆ ಸೃಷ್ಠಿಸಲು ಕಾರಣರಾದ 119 ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಪಾದರಾಯನಪುರ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ದಿನಸಿ ಪದಾರ್ಥಗಳನ್ನು ಸಿದ್ಧಪಡಿಸಿ ವಲಸೆ ಕಾರ್ಮಿಕರಿಗೆ ತಲುಪಿಸುವ ಹಂಗರ್ ಸೇವಿಯರ್ಸ್ ಸ್ವಯಂ ಸೇವಕರ ವಾಹನ ಪಡೆಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮದವರ ಜೊತೆಯಲ್ಲಿ ಮಾತನಾಡಿದರು.
ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಕ್ರಮ ಜರುಗಿಸುವಿರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಷ್ಟ್ರೀಯ ವಿಪತ್ತ ನಿರ್ವಹಣಾ ಕಾಯಿದೆ ಹಾಗೂ ಸಾಂಕ್ರಾಮಿಕ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಅಂತೆಯೇ, ಎಲ್ಲಾ ಹಾಟ್-ಸ್ಪಾಟ್ ಜಿಲ್ಲೆಗಳಲ್ಲೂ ಕೋವಿಡ್-19 ಕಂಟೈನ್ಮೆಂಟ್ ಜೋನ್ಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.