ನವದೆಹಲಿ, ಏ22 (Daijiworld News/MSP): ಕೊರೊನಾ ಬಗ್ಗೆ ಸುಳ್ಳಿನ ಸರಮಾಲೆಯನ್ನೇ ಹೆಣೆದ ಚೀನಾವೂ ಇದೀಗ ಭಾರತದ ಸೇರಿದಂತೆ ವಿದೇಶಗಳಿಗೆ ಕಳುಹಿಸಿದ ಕೊರೊನಾ ಪರೀಕ್ಷಾ ಕಿಟ್ ಕಳಪೆ ಹಾಗೂ ಹಲವು ಲೋಪದೋಷಗಳಿಂದ ಕೂಡಿದೆ. ಕೊವಿಡ್-19 ಟೆಸ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲೇ ಮುಂದಿನ ಎರಡು ದಿನಗಳ ಕಾಲ ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಯಾರು ಬಳಸಬೇಡಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಎಲ್ಲಾ ರಾಜ್ಯಗಳಿಗೆ ಮಂಗಳವಾರ ಸೂಚನೆ ನೀಡಿದೆ.
ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಅನೇಕ ರಾಜ್ಯಗಳು ಆರೋಪ ಮಾಡಿದ್ದವು. ರಾಜಸ್ತಾನವೂ ಕಿಟ್ ಬಳಕೆಯಲ್ಲಿ ಅಸ್ಪಷ್ಟ ಫಲಿತಾಂಶ ಬರುತ್ತಿದೆ ಎಂದು ರಾಪಿಡ್ ಟೆಸ್ಟ್ ಬಳಕೆ ನಿಲ್ಲಿಸುವುದಾಗಿ ಐಸಿಎಂಆರ್ ಗೆ ತಿಳಿಸಿತ್ತು. ರಾಪಿಡ್ ಟೆಸ್ಟ್ ಕಿಟ್ಸ್ ಬಳಸಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ(ಎಸ್ ಎಂಎಸ್) ವೈದ್ಯರು ಕೊವಿಡ್ -19 ರೋಗಿಗಳನ್ನು ಪರೀಕ್ಷಿಸಿದಾಗ ಶೇ.95ರಷ್ಟು ಪ್ರಕರಣಗಳಲ್ಲಿ ನೆಗೆಟಿವ್ ವರದಿ ನೀಡಿತ್ತು.
ಜೈಪುರದ ಎಸ್ ಎಂಎಸ್ ಆಸ್ಪತ್ರೆಯ ಮೈಕ್ರೊ ಬಯೋಲಜಿ ಮತ್ತು ಮೆಡಿಸಿನ್ ವಿಭಾಗ ಈ ಕಿಟ್ಸ್ ಬಳಸಿ ಕೊವಿಡ್- 19 ಸೋಂಕು ದೃಢಪಟ್ಟಿದ್ದ ನೂರು ರೋಗಿಗಳನ್ನು ಪರೀಕ್ಷೆಗೊಳಪಡಿಸಿದಾಗ ಐದು ಮಂದಿಗೆ ಮಾತ್ರ ಕೋವಿಡ್ 19 ಸೋಂಕು ಪಾಸಿಟಿವ್ ಎಂದು ಫಲಿತಾಂಶ ನೀಡಿ, ಉಳಿದ 95 ಜನರಿಗೆ ನೆಗೆಟಿವ್ ಎಂದು ಫಲಿತಾಂಶ ನೀಡಿತ್ತು.
ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿದ ಐಸಿಎಂಆರ್ ನ ಹಿರಿಯ ವಿಜ್ಞಾನಿ ಡಾ|ರಾಮನ್ ಗಂಗಾಖೇಡ್ಕರ್ , ಕಿಟ್ ಗಳಲ್ಲಿ ಲೋಪದೋಷಗಳು ಇರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮೂರು ರಾಜ್ಯಗಳೊಂದಿಗೆ ಚರ್ಚಿಸಿದ್ದೇವೆ. ಹೀಗಾಗಿ ಎಲ್ಲಾ ರಾಜ್ಯಗಳಿಗೂ ಮುಂದಿನ ಎರಡು ದಿನಗಳ ಕಾಲ ರ್ಯಾಪಿಡ್ ತೆಸ್ಟ್ ಕಿಟ್ ಬಳಸಬೇಡಿ ಎಂದಿದ್ದಾರೆ.