ಬೆಂಗಳೂರು, ಏ22 (Daijiworld News/MSP): ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಪ್ರಯೋಗ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬೆಂಗಳೂರಿನ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿ. ನವರಿಗೆ ಒಪ್ಪಿಗೆ ನೀಡಿದೆ.
ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಯಶಸ್ಸಿ ಕಂಡ ಬೆನ್ನಲ್ಲೇ ರಾಜ್ಯದ ಕೊರೋನಾ ಸೋಂಕಿತ ರೋಗಿಗಳಿಗೆ ಪ್ಲಾಸ್ಮಾ ಥರೆಪಿ ಚಿಕಿತ್ಸೆ ಪ್ರಯೋಗಕ್ಕೆ ಐಸಿಎಂಆರ್ ಒಪ್ಪಿಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಪ್ಲಾಸ್ಮಾ ಥೆರಪಿ ಚಿಕಿತ್ಸಾ ಪ್ರಯೋಗ ಆರಂಭಿಸಲು ಅನುಮತಿ ನೀಡುವಂತೆ ರಾಜ್ಯ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಐಸಿಎಂಆರ್ ಎಚ್ಸಿಜಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ಡಾ. ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ಕೋವಿಡ್ 19 ವೈರಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೆಲವು ಸೋಂಕಿತರ ಮೇಲೆ ತಮ್ಮ ತಂಡ ಅಧ್ಯಯನ ಮಾಡಲಿದೆ ಎಂದು ಡಾ. ವಿಶಾಲ್ ರಾವ್ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿರುವುದರಿಂದ ರಾಜ್ಯದ ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳು ಕೂಡಾ ಈ ಕುರಿತಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಇಲಾಖೆ ನಿರ್ದೇಶನ ಜಾರಿ ಮಾಡಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ
ಪ್ಲಾಸ್ಮಾ ಥೆರಪಿ ಏನಿದು?
ಕೊರೊನಾ ವೈರಸ್ನಿಂದ ಚೇತರಿಸಿಕೊಂಡವರ ದೇಹದಿಂದ ರೋಗ ನಿರೋಧಕ ಕಣಗಳನ್ನು ತೆಗೆದು, ಅದನ್ನು ಮತ್ತೋರ್ವ ರೋಗಿಯ ದೇಹಕ್ಕೆ ಸೇರಿಸುವ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಎನ್ನುತ್ತಾರೆ. ಒಬ್ಬ ವ್ಯಕ್ತಿಯ ದೇಹದಿಂದ ಎರಡು ಡೋಸ್ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಬಹುದು. ಒಬ್ಬ ರೋಗಿಗೆ ಒಂದು ಡೋಸ್ನಷ್ಟು ಪ್ರತಿರೋಧ ಕಣಗಳನ್ನು ನೀಡಬೇಕಾಗುತ್ತದೆ. ಅಂದರೆ ಚೇತರಿಸಿಕೊಂಡ ಓರ್ವ ರೋಗಿಯಿಂದ ಇಬ್ಬರಿಗೆ ಈ ರೀತಿ ಪ್ರತಿರೋಧ ಕಣಗಳನ್ನು ನೀಡಬಹುದಾಗಿದೆ.