ಬೆಂಗಳೂರು, ಎ.22 (DaijiworldNews/PY) : ಕೊರೊನಾ ಸೋಂಕಿನಿಂದ ದೇಶಾದ್ಯಂತ ಎದುರಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ನೇರವಾಗಿ ನಾಗರಿಕರ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕ್ಷಿಪ್ರಗತಿಯಲ್ಲಿ ಪರಿಹಾರವನ್ನು ಟ್ವಿಟ್ಟರ್ನಲ್ಲಿ ನೀಡುತ್ತದೆ. ಅದಕ್ಕಾಗಿ ಕೋವಿಡ್ ಇಂಡಿಯಾ ಸೇವಾ ಪ್ರತ್ಯೇಕವಾದ ಖಾತೆಯನ್ನು ಪ್ರಾರಂಭಿಸಿದೆ.
ಕೋವಿಡ್ ಇಂಡಿಯಾ ಸೇವಾ ಖಾತೆಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಟ್ವೀಟ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಕೋವಿಡ್ ಇಂಡಿಯಾ ಸೇವೆ ಟ್ವಿಟರ್ ಸೇವೆಯು ನೇರವಾಗಿ ನಾಗರಿಕರ ಪ್ರಶ್ನಿಗಳಿಗೆ ಕ್ಷಿಪ್ರಗತಿಯಲ್ಲಿ ಪರಿಹಾರವನ್ನು ನೀಡುವಲ್ಲಿ ಸಹಾಯವಾಗಲಿದೆ. ಅಲ್ಲದೇ ತಜ್ಞರು ಕೊರೊನಾಗೆ ಸಂಬಂಧಪಟ್ಟ ಸಾರ್ವಜನಿಕ ಆರೋಗ್ಯ ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಾರೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಸರ್ಕಾರವು ಕೈಗೊಂಡ ಕ್ರಮಗಳು, ಆರೋಗ್ಯ ಶುಶ್ರೂಷ ಸೇವೆಗಳಿಗೆ ಪ್ರವೇಶ ಪಡೆಯುವ ಬಗ್ಗೆ, ನೂತನ ಅಪ್ಡೇಟ್ಗಳು, ರೋಗದ ಲಕ್ಷಣ ಕಂಡುಬಂದ ಸಂದರ್ಭ ಯಾರನ್ನು ಸಂಪರ್ಕಿಸಬೇಕು, ಈ ಟ್ವಿಟ್ಟರ್ ಖಾತೆಯಿಂದ ಇಂತಹ ಅನುಮಾನಗಳಿಗೆ ಸಲಹೆಗಳು ಸಿಗುತ್ತವೆ. ನಾಗರಿಕರು, ಪ್ರಶ್ನೆ ಅಥವಾ ಸಂದೇಹಗಳಿಗೆ ಅನುಗುಣವಾಗಿ ನಿರ್ದಿಷ್ಟ ಇಲಾಖೆ, ಅಧಿಕಾರಿಗಳು ಅಥವಾ ಪ್ರಾಧಿಕಾರಗಳಿಗೆ ಅದನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಸಂಪರ್ಕಿಸಿ ಉತ್ತರ ಪಡೆಯಲು ನೆರವಾಗುತ್ತದೆ.
@CovidIndiaSeva ಎಂದು ಟ್ವಿಟರ್ನಲ್ಲಿ ಟೈಪ್ ಮಾಡಿ ಅದರೊಂದಿಗೆ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ಸಂವಹನ ನಡೆಸಲು ದೇಶದ ಎಲ್ಲಾ ಭಾಷೆಗಳಲ್ಲಿಯೂ ಅವಕಾಶವಿದೆ. ಇದರಲ್ಲಿ ಕೊರೊನಾ ಬಗ್ಗೆ ಯಾವುದೇ ಪ್ರಶ್ನೆಗಳಿಗೆ ಪರಿಹಾರ ಪಡೆದುಕೊಳ್ಳಲು ವೈಯಕ್ತಿಕ ದಾಖಲೆಗಳು, ಸಂಪರ್ಕ ವಿವರ, ಗುರುತಿನ ದಾಖಲೆಗಳು ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದು ಅಥವಾ ಬಹಿರಂಗ ಪಡಿಸುವ ಅವಶ್ಯಕತೆ ಇರುವುದಿಲ್ಲ.