ನವದೆಹಲಿ, ಏ 22 (Daijiworld News/MSP): ದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಲಾಕ್ಡೌನ್ ನಂಥ ಕಠಿಣ ಕ್ರಮ ಕೈಗೊಂಡ ಬಳಿಕವೂ, ಪರೀಕ್ಷೆಗಳನ್ನು ತೀವ್ರಗೊಳಿಸುತ್ತಿರುವ ನಡುವೆಯೂ ದೇಶದಲ್ಲಿ ಕೊರೋನಾ ಕೋವಿಡ್-19 ಪೀಡಿತರ ಸಂಖ್ಯೆ 20 ಸಾವಿರ ಗಡಿಯತ್ತ ತಲುಪಿದೆ. 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 19,984ಕ್ಕೆ ಏರಿಕೆಯಾಗಿದೆ. ಅಲ್ಲದೆ, ವೈರಸ್'ಗೆ ಹೊಸದಾಗಿ 50 ಮಂದಿ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ ದೇಶದಲ್ಲಿ ಮೊದಲ ಬಾರಿಗೆ ಲಾಕ್ಡೌನ್ ಘೋಷಣೆ ಮಾಡುವ ಮುನ್ನ ಏಪ್ರಿಲ್ 19ರಂದು ಇಡೀ ದೇಶದಲ್ಲಿ ಇದ್ದ ಕೊರೊನಾ ಪೀಡಿತರ ಸಂಖ್ಯೆ ಕೇವಲ 166. ಆದರೀಗ ಆ ಸಂಖ್ಯೆ 19,984ಕ್ಕೆ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟಾರಯಾಗಿ 1545 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆ 640ಕ್ಕೆ ಏರಿಕೆಯಾಗಿದೆ.
ದೇಶದಲ್ಲಿಯೇ ಅತೀ ಹೆಚ್ಚು ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರ ದಲ್ಲಿ ಕೊರೋನಾ ಪೀಡಿತರ ಸಂಖ್ಯೆ 5 ಸಾವಿರ ಗಡಿದಾಟಿದೆ. ಇನ್ನು ಇದರಲ್ಲಿ ಮುಂಬೈ ಒಂದರಲ್ಲಿಯೇ 3445 ಕೇಸು ದಾಖಲಾಗಿದ್ದು, 150 ಜನ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್ ನಲ್ಲಿ 239 ಹೊಸ ಪ್ರಕರಣ ದೃಢಪಟ್ಟಿದೆ. ಈ ನಡುವೆ ದೇಶದಲ್ಲಿ ಈವರೆಗೆ 4.49 ಲಕ್ಷ ಜನರ ಮಾದರಿ ಪರೀಕ್ಷಿಸಲಾಗಿದೆ.