ಬೆಂಗಳೂರು, ಏ 22 (Daijiworld News/MSP): ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯ ಅನುಸಾರ ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದಲೇ ಲಾಕ್ ಡೌನ್ ಸಡಿಲಗೊಳಿಸಲಾಗುತ್ತಿದೆ. ಆದ್ರೇ ಕಂಟೈನ್ಮೆಂಟ್ ಝೋನ್ ಗಳಲ್ಲಿ ಈಗ ಇರುವಂತ ಲಾಕ್ ಡೌನ್ ಹಾಗೆಯೇ ಮುಂದುವರೆಯಲಿದೆ.
ಹಾಗೆಂದು ಅಂತರ ಜಿಲ್ಲೆಯ ಸಂಚಾರವಾಗಲೀ, ದ್ವಿಚಕ್ರ ವಾಹನದಲ್ಲಿ ಓಡಾಟಕ್ಕೆ ಅಥವಾ ಸಾರಿಗೆ ಸಂಚಾರವಾಗಲಿ ಆರಂಭಕ್ಕೆ ಅನುಮತಿ ಇಲ್ಲ. ಕೇವಲ ಲಾರಿ ರಿಪೇರಿ ಗ್ಯಾರೇಜ್, ಡಾಬಾ, ಕೊರಿಯರ್ ಸೇವೆ, ಪ್ಲಂಬರ್ , ಎಲೆಕ್ಟ್ರೀಷಿಯನ್, ಬಡಗಿ, ಕೇಬಲ್ ಹಾಗೂ ಡಿಟಿಎಚ್ ಆಪರೇಟರ್, ಅಗತ್ಯ ವಸ್ತುಗಳ ಆನ್ ಲೈನ್ ಡೆಲಿವರಿ, ಆಹಾರ ಸಂಸ್ಕರಣಾ ಘಟಕ ಅನುಮತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ವಲಯ ಮೀನುಗಾರಿಕೆ ವಲಯಗಳಿಗೆ ಸಂಬಂಧಿಸಿದಂತೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಕಂಟೇನ್ ಮೆಂಟ್ ಜೋನ್ ಗೆ ಇದ್ಯಾವುದೇ ನಿಯಮ ಅನ್ವಯಿಸುವುದಿಲ್ಲ.
ಇನ್ನು ಬಸ್ ಸಂಚಾರ , ಮೆಟ್ರೋ , ಆಟೋ ಕ್ಯಾಬ್ , ರೈಲು, ಮದ್ಯ ಮಾರಾಟ, ಧಾರ್ಮಿಕ ಸಭೆ ಸಮಾರಂಭ , ಚಿತ್ರಮಂದಿರ ಮಾಲ್ , ಐಟಿ ಬಿಟಿ , ವಲಯ, ಶಾಲಾ - ಕಾಲೇಜುಗಳಿಗೆ ಯಾವುದೇ ಲಾಕ್ ಡೌನ್ ರಿಲೀಫ್ ನ್ನು ಸರ್ಕಾರ ನೀಡದೆ ಯಥಾ ಸ್ಥಿತಿ ಮುಂದುವರಿದಿದೆ.