ನವದೆಹಲಿ, ಎ.22 (DaijiworldNews/PY) : ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಟ ನಡೆಸುತ್ತಿರುವ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವವರಿಗೆ 6 ತಿಂಗಳುಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ನೀಡಲು ಸುಗ್ರೀವಾಜ್ಞೆ ರೂಪಿಸಲಾಗಿದೆ. ಇದು ರಾಷ್ಟ್ರಪತಿಗಳ ಸಹಿ ದೊರೆತ ತಕ್ಷಣವೇ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಸುಗ್ರೀವಾಜ್ಞೆಯಲ್ಲಿ ಇಂತಹ ಪ್ರಕರಣಗಳನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸಲು ಮತ್ತು ಜಾಮೀನು ನೀಡದೇ ಇರಲು ಅವಕಾಶವಿದೆ. ಸುಗ್ರೀವಾಜ್ಞೆಯ ಅನ್ವಯ ತಪ್ಪಿತಸ್ಥರಿಗೆ 1 ಲಕ್ಷದಿಂದ 5 ಲಕ್ಷದ ವರೆಗೆ ದಂಡ ವಿಧಿಸಲೂ ಅವಕಾಶವಿದೆ ಎಂದರು.
1987ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸುಗ್ರೀವಾಜ್ಞೆ ಮುಖಾಂತರ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದರು.
ಮಹಾಮಾರಿ ಕೊರೊನಾ ಸೋಂಕಿನಿಂದ ಆರೋಗ್ಯ ಕಾರ್ಯಕರ್ತರು ದೇಶವನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ಆದರೆ, ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಅವರ ಮೇಲೆ ಆಗುವ ಹಲ್ಲೆ, ಹಿಂಸೆ, ದೌರ್ಜನ್ಯಗಳನ್ನು ಸಹಿಸುವುದಿಲ್ಲ ಎಂದರು.