ಬೆಂಗಳೂರು, ಎ.23 (DaijiworldNews/PY) : ರಾಜ್ಯದ 1.04 ಲಕ್ಷ ವಿವಿಧ ವಸತಿ ಫಲಾನುಭವಿಗಳಿಗೆ ಖಾತೆಗೆ ಬಾಕಿ ಮೊತ್ತ ನೇರ ಜಮೆ ಮಾಡಲು ಕೇಂದ್ರ ಸರ್ಕಾರದ ಸೂಚನೆಯಂತೆ ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ವಿಜಿಲ್ ಆಪ್ ಮೂಲಕ ಪರಿಶೀಲಿಸುವ ಉದ್ದೇಶದಿಂದ ಬಾಕಿ ಉಳಿಸಿಕೊಳ್ಳಲಾಗಿತ್ತು. ಇನ್ನೂ 2-3 ತಿಂಗಳುಗಳು ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬೇಕಾಗಿತ್ತು. ಆದರೆ, ನಗದು ನೇರ ವರ್ಗಾವಣೆಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಕ್ರಮ ವಹಿಸಿದ್ದು, ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಇದಕ್ಕಾಗಿ 400 ಕೋಟಿ.ರೂ ಬಿಡುಗಡೆ ಮಾಡಲಾಗುವುದು ಎಂದರು.
ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ 43 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ವರ್ಷದಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಿದ್ದು, ಆನ್ಲೈನ್ ಮೂಲಕ ಅರ್ಹ ವಸತಿ ರಹಿತರಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ತಿಳಿಸಿದರು.