ಮುಂಬೈ, ಎ.23 (DaijiworldNews/PY) : ಮದುವೆಯನ್ನು ಸಾಕ್ಷೀಕರಿಸುವ ಯಾವುದೇ ವಿಧಿವತ್ತಾದ ಆಚರಣೆಗಳು ಇಲ್ಲದೇ ನೀಡಲಾದ ಮ್ಯಾರೇಜ್ ಸರ್ಟಿಫಿಕೇಟ್ ಅಸಿಂಧು ಎಂದು ಮುಂಬೈ ಹೈಕೋರ್ಟ್ ತಿಳಿಸಿದೆ.
ಥಾಣೆಯ ನಿವಾಸಿಯೊಬ್ಬರ ಮ್ಯಾರೇಜ್ ಸರ್ಟಿಫಿಕೇಟ್ಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಯ ಸಂದರ್ಭ ಈ ತೀರ್ಪನ್ನು ನ್ಯಾಯಾಲಯ ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಥಾಣೆ ನಿವಾಸಿಯೊಬ್ಬ ವ್ಯಾಯಾಮ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದು, ಈ ಮದುವೆಗೆ ಆಕೆಯ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ ಎಂಬ ಕಾರಣದಿಂದ 2016ರ ಸೆ.29ರಂದು ಥಾಣೆಯ ಮುನ್ಸಿಪಲ್ ಕಾರ್ಪೋರೇಷನ್ನಿಂದ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಂಡಿದ್ದ.
ಸ್ಥಳೀಯ ಮಂಡಳಿಯೊಂದರಲ್ಲಿ ಇವರಿಬ್ಬರಿಗೆ 2016ರ ಜು.28ರಂದು ಮದುವೆಯಾಗಿದೆ ಎಂದು ಸರ್ಟಿಫಿಕೇಟ್ನಲ್ಲಿ ಬರೆಯಲಾಗಿತ್ತು. ಇದನ್ನು ಆಕ್ಷೇಪಿಸಿದ ಹುಡುಗಿಯ ಪೋಷಕರು ಠಾಣೆಗೆ ದೂರು ಸಲ್ಲಿಸಿದ್ದರು.
ತಮ್ಮ ಮಗಳನ್ನು ಈತ ಬಲವಂತವಾಗಿ ಅಪಹರಿಸಿ ಸಹಿ ಮಾಡಿಸಿಕೊಂಡಿದ್ದಾನೆಂದು ದೂರಿದ್ದರು. ಥಾಣೆ ಕೌಟುಂಬಿಕ ನ್ಯಾಯಾಲಯ 2017ರ ನ.16ರಂದು ಪ್ರಕರಣದ ವಿಚಾರಣೆ ನಡೆಸಿ ಮ್ಯಾರೇಜ್ ಸರ್ಟಿಫಿಕೆಟ್’ನ್ನು ಊರ್ಜಿತಗೊಳಿಸಬೇಕೆಂಬ ಈತನ ಮನವಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಈತ, ಹೈಕೋರ್ಟ್ ಮೊರೆ ಹೋಗಿದ್ದ.